ADVERTISEMENT

ಸ್ತ್ರೀಯರು ಶಬರಿಮಲೆ ಪ್ರವೇಶ ಆದೇಶ ಜಾರಿ ವಿರೋಧಿಸಿ ಬೃಹತ್ ಜಾಥಾ

ಪಿಟಿಐ
Published 13 ಅಕ್ಟೋಬರ್ 2018, 16:19 IST
Last Updated 13 ಅಕ್ಟೋಬರ್ 2018, 16:19 IST
ಶಬರಿಮಲೆ ಅಯ್ಯಪ್ಪ ಭಕ್ತರು ಕೊಯಮತ್ತೂರಿನಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು
ಶಬರಿಮಲೆ ಅಯ್ಯಪ್ಪ ಭಕ್ತರು ಕೊಯಮತ್ತೂರಿನಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು   

ತಿರುವನಂತಪುರಂ:ಎಲ್ಲ ವಯಸ್ಸಿನ ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಜಾರಿ ವಿರೋಧಿಸಿ ಸಾವಿರಾರು ಭಕ್ತರು ಶನಿವಾರ ಬೃಹತ್ ಜಾಥಾ ನಡೆಸಿದರು.

ಕೊಚ್ಚಿಯ ಜನನಿಬಿಡ ರಸ್ತೆಗಳಲ್ಲಿ ಅಯ್ಯಪ್ಪಸ್ವಾಮಿ ಚಿತ್ರವಿರುವ ಫಲಕಗಳನ್ನು ಹಿಡಿದು, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ, ಶತಮಾನಕ್ಕೂ ಹಳೆಯದಾದ ಶಬರಿಮಲೆಯ ಪಾವಿತ್ರ್ಯ ಕಾಪಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡುವುದಕ್ಕೆ ಕೇರಳ ಬಿಜೆಪಿ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಎನ್‌ಡಿಎ ನೇತೃತ್ವದ ಪ್ರತಿಭಟನಾ ರ‍್ಯಾಲಿಯು ಶನಿವಾರ ಕೊಲ್ಲಂ ತಲುಪಿದ್ದು, ಸೋಮವಾರ ರಾಜಧಾನಿಯನ್ನು ಮುಟ್ಟಲಿದೆ.

ತೃಪ್ತಿ ದೇಸಾಯಿ ಅವರು ದೇಗುಲ ಪ್ರವೇಶಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಒತ್ತಾಯಿಸಿದ್ದಾರೆ. ‘ತೃಪ್ತಿ ಅವರು ಭಕ್ತರೇ ಅಥವಾ ಅಲ್ಲವೇ ಎಂದು ನನಗೆ ಗೊತ್ತಿಲ್ಲ. ಆದರೆ ಶಬರಿಮಲೆಯನ್ನು ಯಾತ್ರಾಸ್ಥಳ ಎಂದು ಪರಿಗಣಿಸದೇ ಅದನ್ನೊಂದು ಸವಾಲು ಎಂಬಂತೆ ಅವರು ತೆಗೆದುಕೊಂಡಿದ್ದಾರೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪಂದಳಂ ರಾಜಮನೆತನದ ಸದಸ್ಯ ಸಸಿಕುಮಾರ್ ವರ್ಮಾ ಅವರು ತೃಪ್ತಿ ದೇಸಾಯಿ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ಅವರು ಒತ್ತಾಯಿಸಿದ್ದಾರೆ. ಈ ಸಂಬಂಧ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸಭೆ: ಕೋರ್ಟ್ ಆದೇಶ ಜಾರಿಗೆ ಕೇರಳ ಸರ್ಕಾರಮುಂದಾಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಏರ್ಪಡಿಸಿರುವ ಅಗತ್ಯ ಸಿದ್ಧತೆ ಕುರಿತು ಸಮಾಲೋಚನಾ ಸಭೆ ನಡೆಸಿತು.ಅಕ್ಟೋಬರ್ 17ರಂದು ಶಬರಿಮಲೆ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ.

ಮಹಿಳಾ ಕಾರ್ಯಕರ್ತರಿಂದ ಆತ್ಮಹತ್ಯೆ: ಬೆದರಿಕೆ

ತುಲಾ ಮಾಸ ಪೂಜೆಗಾಗಿಶಬರಿಮಲೆ ದೇಗುಲಮುಂದಿನ ವಾರ ತೆರೆಯಲಿದೆ.ಈ ಹಿನ್ನಲೆಯಲ್ಲಿ, ಸ್ತ್ರೀಯರು ದೇಗುಲ ಪ್ರವೇಶಿಸಿದರೆ ನಮ್ಮ ಮಹಿಳಾ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆಎಂದು ಶಿವಸೇನೆಯ ಕೇರಳಘಟಕಎಚ್ಚರಿಕೆ ನೀಡಿದೆ.

‘ಅಕ್ಟೋಬರ್‌ 17–18ರಂದು ನಮ್ಮ ಮಹಿಳಾ ಕಾರ್ಯಕರ್ತರುಪಂಪಾ ನದಿ ತೀರದಲ್ಲಿ ಆತ್ಮಹತ್ಯಾ ದಳದಂತೆ ಸೇರಲಿದ್ದಾರೆ. ಯುವತಿಯರು ದೇಗುಲ ಪ್ರವೇಶಿಸಲು ಪ್ರಯತ್ನಿಸಿದರೆ, ನಮ್ಮ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ’ ಎಂದುಶಿವಸೇನಾ ಸದಸ್ಯ ಪೆರಿಂಗಮ್ಮಳ ಅಜಿ ಹೇಳಿದ್ದಾರೆ.

ಶಬರಿಮಲೆ ದೇವಸ್ಥಾನದೊಳಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶ ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ‘ಮಹಿಳೆಯರು ದೇಗುಲ ಪ್ರವೇಶಿಸಬಹುದು’ ಎಂದು ಸೆ. 28ರಂದು ತೀರ್ಪು ನೀಡಿತ್ತು.

ಈ ತೀರ್ಪನ್ನು ಕೇರಳ ಸರ್ಕಾರ ಸೇರಿದಂತೆ ವ್ಯಾಪಕವಾಗಿ ಸ್ವಾಗತಿಸಲಾಗಿತ್ತು.ಸಾವಿರಾರು ಭಕ್ತರು ಹಾಗೂಕೆಲವು ಸಂಘಟನೆಗಳುಸುಪ್ರೀಂ ತೀರ್ಪು ವಿರೋಧಿಸಿದ್ದವು.ಶಿವಸೇನೆಯು, ತೀರ್ಪು ವಿರೋಧಿಸಿ ಅಕ್ಟೋಬರ್‌ 01ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.