ADVERTISEMENT

ಪೆಗಾಸಸ್‌ ಗೂಢಚರ್ಯೆ: ತನಿಖಾ ಆಯೋಗ ರಚನೆ; ಮಮತಾ ನಿರ್ಧಾರ ಶ್ಲಾಘಿಸಿದ ಶಿವಸೇನಾ

ಜಂಟಿ ಸಂಸದೀಯ ಸಮಿತಿ ರಚಿಸಲು ಒತ್ತಾಯ

ಪಿಟಿಐ
Published 29 ಜುಲೈ 2021, 7:05 IST
Last Updated 29 ಜುಲೈ 2021, 7:05 IST
.
.   

ಮುಂಬೈ: ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ತನಿಖಾ ಆಯೋಗ ರಚಿಸಿರುವ ಕ್ರಮವನ್ನು ಶಿವಸೇನಾ ಶ್ಲಾಘಿಸಿದೆ.

ಕೇಂದ್ರ ಸರ್ಕಾರ ಮಾಡಬೇಕಾದ ಕಾರ್ಯವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಡಿದ್ದಾರೆ ಎಂದು ಶಿವಸೇನಾದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಗೂಢಚರ್ಯೆ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎನ್ನುವ ವಿರೋಧ ಪಕ್ಷಗಳ ಒತ್ತಾಯಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ನಿಗೂಢವಾಗಿದೆ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

ADVERTISEMENT

ಪೆಗಾಸಸ್‌ ಎನ್ನುವುದು ಈಗ ಸಿಬಿಐ, ಇ.ಡಿ, ಆದಾಯ ತೆರಿಗೆ ಇಲಾಖೆಯ ಇನ್ನೊಂದು ವಿಭಾಗ ಎಂದು ದೇಶದ ಜನತೆ ತಿಳಿದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿಯೇ ಮಮತಾ ಬ್ಯಾನರ್ಜಿ ಅವರು ಧೈರ್ಯದಿಂದ ತನಿಖೆಗೆ ಸೂಚಿಸಿದ್ದಾರೆ. ಈ ಮೂಲಕ ಎಲ್ಲರನ್ನೂ ಎಚ್ಚರಿಸಿದ್ದಾರೆ ಎಂದು ಹೇಳಿದೆ.

ಫ್ರಾನ್ಸ್‌ ಸರ್ಕಾರವು ಸಹ ಪೆಗಾಸಸ್‌ ಗೂಢಚರ್ಯೆ ಬಗ್ಗೆ ತನಿಖೆಗೆ ಆದೇಶಿಸಿದೆ. ಫ್ರಾನ್ಸ್‌ ಸರ್ಕಾರ ತನಿಖೆಗೆ ಮುಂದಾಗಿರುವಾಗ ಭಾರತ ಸರ್ಕಾರ ಏಕೆ ಹಿಂಜರಿಯುತ್ತಿದೆ ಎಂದು ಶಿವಸೇನಾ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.