ADVERTISEMENT

ಬಿಜೆಪಿಯವರು ರಾಹುಲ್‌ ಗಾಂಧಿಗೆ ಹೆದರುತ್ತಾರೆ: ಶಿವಸೇನಾ

ಪಿಟಿಐ
Published 7 ಜನವರಿ 2021, 11:55 IST
Last Updated 7 ಜನವರಿ 2021, 11:55 IST
ಶಿವಸೇನಾ
ಶಿವಸೇನಾ   

ಮುಂಬೈ: ದೆಹಲಿಯಲ್ಲಿ ದೇಶದ ಆಡಳಿತ ನಡೆಸುತ್ತಿರುವವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಹೆದರುತ್ತಾರೆ ಎಂದು ಹೇಳಿರುವ ಶಿವಸೇನಾ, ಮೋದಿ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿಂತಿರುವ ಅವರನ್ನು ‘ಯೋಧ’ ಎಂದು ಶ್ಲಾಘಿಸಿದೆ.

‘ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗುತ್ತಿರುವುದು ಒಳ್ಳೆಯದು’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. ‘ದೆಹಲಿಯಲ್ಲಿರುವ ಆಡಳಿತಗಾರರು ರಾಹುಲ್‌ ಗಾಂಧಿಯವರನ್ನು ಕಂಡು ಹೆದರುತ್ತಾರೆ. ಗಾಂಧಿ ಕುಟುಂಬಕ್ಕೆ ಅಪಮಾನ ಮಾಡುವ ಅಭಿಯಾನವನ್ನು ನಡೆಸುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ಉಲ್ಲೇಖಿಸಲಾಗಿದೆ.

‘ಒಬ್ಬ ಸರ್ವಾಧಿಕಾರಿ, ತನ್ನ ವಿರುದ್ಧ ಒಬ್ಬ ನಿಂತಿದ್ದಾನೆ ಎಂದರೆ ಹೆದರುತ್ತಾನೆ. ವಿರುದ್ಧವಾಗಿ ನಿಂತಿರುವ ಒಂಟಿಯಾದ ಯೋಧ ಪ್ರಾಮಾಣಿಕನಾಗಿದ್ದರೆ ಆ ಸರ್ವಾಧಿಕಾರಿಯ ಭಯ ನೂರು ಪಟ್ಟು ಹೆಚ್ಚಾಗುತ್ತದೆ. ದೆಹಲಿಯಲ್ಲಿರುವ ಆಡಳಿತಗಾರರು ಈ ವಿಭಾಗಕ್ಕೆ ಸೇರುತ್ತಾರೆ. ರಾಹುಲ್‌ ಗಾಂಧಿ ಅವರು ಮತ್ತೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗುತ್ತಿರುವುದು ಒಳ್ಳೆಯದು. ನರೇಂದ್ರ ಮೋದಿ ಅವರನ್ನು ಬಿಟ್ಟರೆ ಬಿಜೆಪಿಗೆ ಬೇರೆ ಯಾವ ಪರ್ಯಾಯವೂ ಇಲ್ಲ ಹಾಗೂ ರಾಹುಲ್‌ ಗಾಂಧಿ ಅವರನ್ನು ಬಿಟ್ಟರೆ ಕಾಂಗ್ರೆಸ್‌ಗೂ ಬೇರೆ ಪರ್ಯಾಯವಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು’ ಎಂದು ಹೇಳಲಾಗಿದೆ.

ADVERTISEMENT

‘ರಾಹುಲ್‌ ಗಾಂಧಿ ಅವರನ್ನು ಒಬ್ಬ ದುರ್ಬಲ ನಾಯಕ ಎಂದು ಅಪಪ್ರಚಾರ ಮಾಡಿದರೂ, ಅವರು ಪ್ರತಿಯೊಂದು ಅವಕಾಶಗಳನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಎದ್ದು ನಿಂತಿದ್ದಾರೆ. ವಿಪಕ್ಷಗಳೂ ಇಂದಲ್ಲ ನಾಳೆ ಮೇಲೆದ್ದು ಬರಲಿವೆ’ ಎಂದು ಉಲ್ಲೇಖಿಸಲಾಗಿದೆ.

ಮೋದಿ ಸರ್ಕಾರಕ್ಕೆ ಪರ್ಯಾಯವಾಗಿ ಕಾಂಗ್ರೆಸ್‌ ನೇತೃತ್ವದ ಯುಪಿಎ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಶಿವಸೇನಾ ನಾಯಕ ಸಂಜಯ್‌ ರಾವತ್‌ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರನ್ನು ಶಿವಸೇನಾ ಈ ರೀತಿ ಹೊಗಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.