ADVERTISEMENT

ನಾರಾಯಣ ರಾಣೆ ಮನೆ ಮುಂದೆ ಪ್ರತಿಭಟನೆ ನಡೆಸಿದ ಸೇನಾ ಕಾರ್ಯಕರ್ತರಿಂದ ಉದ್ಧವ್ ಭೇಟಿ

ಪಿಟಿಐ
Published 25 ಆಗಸ್ಟ್ 2021, 10:40 IST
Last Updated 25 ಆಗಸ್ಟ್ 2021, 10:40 IST
ಉದ್ಧವ್ ಠಾಕ್ರೆ (ಪಿಟಿಐ ಚಿತ್ರ)
ಉದ್ಧವ್ ಠಾಕ್ರೆ (ಪಿಟಿಐ ಚಿತ್ರ)   

ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ನಿವಾಸದ ಎದುರು ಪ್ರತಿಭಟನೆ ನಡೆಸಿದ ಶಿವಸೇನಾದ ಯುವ ಘಟಕ ಯುವಸೇನಾ ಸದಸ್ಯರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಬೇಟಿಯಾದರು.

ಮಂಗಳವಾರ ರಾತ್ರಿ ಠಾಕ್ರೆ ಅವರ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಮುಖ್ಯಂತ್ರಿಗಳನ್ನು ಭೇಟಿಯಾಗಿದ್ದೇವೆ ಎಂದು ಯುವಸೇನಾ ನಾಯಕ ವರುಣ್ ಸರ್‌ದೇಸಾಯಿ ತಿಳಿಸಿದ್ದಾರೆ. ಇವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಯುವ ಸೇನಾ ನಾಯಕರು ಮತ್ತು ಮುಖ್ಯಮಂತ್ರಿ ಭೇಟಿ ವೇಳೆ ಸಚಿವ, ಯುವಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಸಹ ಹಾಜರಿದ್ದರು.

ಉದ್ಧವ್ ಠಾಕ್ರೆ ವಿರುದ್ಧ ರಾಣೆ ಅವರು ನೀಡಿದ್ದ ಹೇಳಿಕೆ ವಿಚಾರದಲ್ಲಿ ಶಿವಸೇನಾ ಯುವ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ರಾಣೆ ನಿವಾಸದ ಎದುರು ಮಂಗಳವಾರ ಘರ್ಷಣೆ ನಡೆದಿತ್ತು. ಎರಡೂ ಕಡೆಯವರಿಂದ ಕಲ್ಲು ತೂರಾಟವೂ ನಡೆದಿತ್ತು. ಬಳಿಕ ಘಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸೋಮವಾರ ಜನಾಶೀರ್ವಾದ ಯಾತ್ರೆಯ ಭಾಗವಾಗಿ ರಾಯಗಡ ಜಿಲ್ಲೆಯಲ್ಲಿ ಮಾತನಾಡಿದ್ದ ರಾಣೆ ಅವರು, ‘ಠಾಕ್ರೆ ಅವರು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಷಣ ಮಾಡುವಾಗ, ದೇಶಕ್ಕೆ ಸ್ವಾತಂತ್ರ್ಯ ಬಂದು ಎಷ್ಟು ವರ್ಷ ಆಗಿದೆ ಎಂಬುದನ್ನೇ ಮರೆತು ಹೋದರು. ಪಕ್ಕದಲ್ಲಿ ಇರುವವರನ್ನು ಕೇಳಿ, ಭಾಷಣ ಮುಂದುವರಿಸಿದ್ದರು. ನಾನು ಅಲ್ಲಿ ಇದ್ದಿದ್ದರೆ, ಅವರ ಕೆನ್ನೆಗೆ ಬಾರಿಸುತ್ತಿದ್ದೆ’ ಎಂದು ಹೇಳಿದ್ದರು.

ಬಳಿಕ ಅವರ ಬಂಧನಕ್ಕೆ ಆದೇಶಿಸಲಾಗಿತ್ತು. ರತ್ನಗಿರಿ ಜಿಲ್ಲೆಯಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದ ರಾಣೆ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ನಂತರ ಸಂಗಮೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಈ ವಿಚಾರಲ್ಲಿ ಶಿವಸೇನಾ ಮತ್ತು ಬಿಜೆಪಿ ಕರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.