
ಮುಂಬೈ: ಶಿವಸೇನಾ(ಶಿಂದೆ ಬಣ) ಸಚಿವರು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗದೆ ದೂರ ಉಳಿದರು. ಶಿವಸೇನಾ ನಾಯಕ, ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು.
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಯ ಚುನಾವಣೆ ಮುನ್ನ ಈ ರಾಜಕೀಯ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದಿದೆ.
‘ಶಿಂದೆ ಬಣದ ಕಾರ್ಯಕರ್ತರು ಮತ್ತು ನಾಯಕರನ್ನು ಕಡೆಗಣಿಸುವುದನ್ನು ಒಪ್ಪಿಕೊಳ್ಳುವುದಿಲ್ಲ’ ಎಂಬ ಸಂದೇಶವನ್ನು ಬಿಜೆಪಿಗೆ ನೀಡುವ ನಿಟ್ಟಿನಲ್ಲಿ ಶಿವಸೇನಾ ಸಚಿವರು ಸಭೆಯಿಂದ ದೂರ ಉಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಕಲ್ಯಾಣ–ಡೊಂಬಿವಲಿನಲ್ಲಿ ಇತ್ತೀಚೆಗೆ ಶಿವಸೇನಾದಿಂದ ಬಿಜೆಪಿಗೆ ಹಲವರು ಪಕ್ಷಾಂತರವಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ’ ಎಂದು ಮೂಲಗಳು ಹೇಳಿವೆ.
ಫಡಣವೀಸ್ ಜತೆ ಚರ್ಚೆ: ಸಂಪುಟ ಸಭೆ ಮುಕ್ತಾಯವಾದ ಬಳಿಕ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಭೇಟಿ ಮಾಡಿದ ಶಿವಸೇನಾ ಸಚಿವರು ಡೊಂಬಿವಲಿನಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ‘ಮೊದಲು ಶಿವಸೇನಾವೇ ಉಲ್ಹಾಸ್‌ನಗರದಲ್ಲಿ ಬಿಜೆಪಿ ಸದಸ್ಯರನ್ನು ಪಕ್ಷಾಂತರ ಮಾಡಿಸಿದ್ದು’ ಎಂದು ತಿರುಗೇಟು ನೀಡಿರುವುದಾಗಿ ಮೂಲಗಳು ಹೇಳಿವೆ.
ಶಿವಸೇನಾವು ಮಿತ್ರಪಕ್ಷಗಳ ಸದಸ್ಯರನ್ನು ದೂರವಿಟ್ಟಾಗ, ಬಿಜೆಪಿಯು ಅದೇ ರೀತಿ ಮಾಡಿದರೆ ದೂರು ನೀಡಬಾರದು. ಮಿತ್ರಪಕ್ಷಗಳ ನಡುವೆ ಪಕ್ಷಾಂತರವಾಗಬಾರದು ಎಂದು ಫಡಣವೀಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.