ಹಳಸಿದ ಆಹಾರ ನೀಡಿದ್ದಕ್ಕೆ ಕ್ಯಾಂಟೀನ್ ಸಿಬ್ಬಂದಿಗೆ ಥಳಿಸಿದ ಶಿವಸೇನಾ ಶಾಸಕ
ಮುಂಬಯಿ: ಹಳಸಿದ ಆಹಾರ ನೀಡಲಾಗಿದೆ ಎಂದು ಆರೋಪಿಸಿ ಆಡಳಿತಾರೂಢ ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ಅವರು ಮುಂಬೈ ಶಾಸಕರ ಹಾಸ್ಟೆಲ್ ಕ್ಯಾಂಟೀನ್‌ನ ಉದ್ಯೋಗಿಯೊಬ್ಬರಿಗೆ ಥಳಿಸಿರುವ ಆರೋಪ ಕೇಳಿಬಂದಿದೆ. ಘಟನೆಯ ವಿಡಿಯೊ ಹರಿದಾಡಿದ್ದು, ಅವರ ನಡವಳಿಕೆಯನ್ನು ವಿಪಕ್ಷಗಳು ಟೀಕಿಸಿವೆ.
ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ತನಗೆ ಕಳಪೆ ಆಹಾರ ನೀಡಲಾಗಿದ್ದು, ಇದರ ಬಗ್ಗೆ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಕ್ಯಾಂಟೀನ್ ನಿರ್ವಾಹಕರನ್ನು ಅವರು ಗದರಿಸಿರುವುದು ವಿಡಿಯೊದಲ್ಲಿ ದಾಖಲಾಗಿದ್ದು, ಬಿಲ್ ಪಾವತಿಸಲು ನಿರಾಕರಿಸಿ, ಕೌಂಟರ್‌ನಲ್ಲಿ ಕೂತಿದ್ದ ಸಿಬ್ಬಂದಿಯನ್ನು ಥಳಿಸಿದ್ದಾರೆ.
ಶಿವಸೇನೆ (ಉದ್ಧವ್ ಠಾಕ್ರೆ) ಬಣದ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಶಾಸಕನ ಕೃತ್ಯವನ್ನು ಖಂಡಿಸಿದ್ದು, ಕಳೆದ ವರ್ಷ ಅವರು ರಾಹುಲ್ ಗಾಂಧಿ ಅವರ ನಾಲಗೆಯನ್ನು ಕತ್ತರಿಸುವವರಿಗೆ ₹11 ಲಕ್ಷ ಘೋಷಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ‘ಈಗ ಈ ವ್ಯಕ್ತಿ ಬಡ, ಅಸಹಾಯಕ ಕ್ಯಾಂಟೀನ್ ನೌಕರನನ್ನು ಥಳಿಸಿದ್ದಾರೆ. ಆದರೆ ಅವರು ಬಿಜೆಪಿ ಮೈತ್ರಿಯಾದ್ದರಿಂದ ಟಿವಿಯಲ್ಲಿ ಯಾವುದೇ ಆಕ್ರೋಶ ಇಲ್ಲ’ ಎಂದು ಹೇಳಿದ್ದಾರೆ.
ಗಾಯಕ್ವಾಡ್ ಅವರು ಕಳೆದ ವರ್ಷ ಪೊಲೀಸರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅದಕ್ಕೂ ಮುಂಚೆ ಅವರು ಯುವಕರೊಬ್ಬರಿಗೆ ಬಡಿಗೆಯಿಂದ ಥಳಿಸುತ್ತಿರುವ ವಿಡಿಯೊ ವೈರಲ್ ಆಗಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರೂ ಸಂಜಯ್ ಅವರ ವರ್ತನೆಯನ್ನು ಖಂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.