ADVERTISEMENT

ಅಟಲ್ ಕಾಲದ ಎನ್‌ಡಿಎಯನ್ನು ಹೊಗಳಿ ಮೋದಿ ಸರ್ಕಾರದ ನೀತಿಗಳನ್ನು ಪ್ರಶ್ನಿಸಿದ ಸೇನಾ

ಪಿಟಿಐ
Published 19 ಸೆಪ್ಟೆಂಬರ್ 2020, 12:11 IST
Last Updated 19 ಸೆಪ್ಟೆಂಬರ್ 2020, 12:11 IST
ಶಿವಸೇನಾ ಸಂಸದ, ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವುತ್
ಶಿವಸೇನಾ ಸಂಸದ, ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವುತ್   

ಮುಂಬೈ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದ ಎನ್‌ಡಿಎಯನ್ನು ಶ್ಲಾಘಿಸಿರುವ ಶಿವಸೇನಾ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನಿಸಿದೆ.

ಕೇಂದ್ರ ಸರ್ಕಾರವು ವಿಮಾನ ನಿಲ್ದಾಣಗಳು, ಏರ್ ಇಂಡಿಯಾ, ರೈಲ್ವೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ರೈತರ ಜೀವನದ ನಿಯಂತ್ರಣವನ್ನು ವ್ಯಾಪಾರಿಗಳು ಮತ್ತು ಖಾಸಗಿಯವರಿಗೆ ನೀಡುತ್ತಿದೆ ಎಂದು ಸೇನಾ ಟೀಕಿಸಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಈ ವಿಚಾರಗಳನ್ನು ಉಲ್ಲೇಖಿಸಿರುವ ಸೇನಾ, ‘ರೈತರು, ಸಂಘಟನೆಗಳು ಅಥವಾ ಪ್ರತಿಪಕ್ಷಗಳ ಬಳಿ ಚರ್ಚಿಸದೆ ಕೇಂದ್ರ ಸರ್ಕಾರವು ಕೃಷಿಗೆ ಸಂಬಂಧಿತ ಮಸೂದೆಗಳನ್ನು ಮಂಡಿಸಿದೆ. ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್ ಬಾದಲ್ ಅವರ ರಾಜೀನಾಮೆ ಈ ವಿಷಯವನ್ನು ಬಹಿರಂಗಗೊಳಿಸಿದೆ’ ಎಂದು ಹೇಳಿದೆ.

ADVERTISEMENT

‘ಅಟಲ್ ಬಿಹಾರಿ ವಾಜಪೇಯಿ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಕಾಲದ ಎನ್‌ಡಿಎ ಭಿನ್ನವಾಗಿತ್ತು. ಆಗ ಮಿತ್ರಪಕ್ಷಗಳನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿತ್ತು ಮತ್ತು ಅವುಗಳ ಜತೆ ಸಮಾಲೋಚನೆ ನಡೆಸಲಾಗುತ್ತಿತ್ತು. ನೀತಿ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಮಿತ್ರಪಕ್ಷಗಳ ಜೊತೆ ಸಮಾಲೋಚನೆ ನಡೆಸಲಾಗುತ್ತಿತ್ತು. ಬಿಜೆಪಿ ನಾಯಕರು ಮಿತ್ರಪಕ್ಷಗಳ ನಾಯಕರನ್ನು ಗೌರವದಿಂದ ಕಾಣುತ್ತಿದ್ದರು. ಮಿತ್ರ ಪಕ್ಷಗಳ ನಾಯಕರ ಮಾತಿಗೆ ಹೆಚ್ಚು ಬೆಲೆ ನೀಡಲಾಗುತ್ತಿತ್ತು’ ಎಂದು ಸೇನಾ ಹೇಳಿದೆ.

ಮೋದಿ ಸರ್ಕಾರದ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಬಾದಲ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದು ಸ್ವೀಕೃತವಾಗಿದೆ. ಶಿವಸೇನಾ ಈ ಹಿಂದೆಯೇ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದೆ. ಈಗ ಶಿರೋಮಣಿ ಅಕಾಲಿ ದಳದದ ಸರದಿ ಎಂದು ಸೇನಾ ಹೇಳಿದೆ.

ಮಹಾರಾಷ್ಟ್ರದಂತೆ ಪಂಜಾಬ್ ಕೂಡ ಕೃಷಿಯಾಧಾರಿತ ಆರ್ಥಿಕತೆ ಹೊಂದಿರುವ ರಾಜ್ಯ. ಮಸೂದೆ ಜಾರಿಗೆ ತರಲು ಮುಂದಾಗುವ ಮುನ್ನ ಸರ್ಕಾರವು ರೈತ ಸಂಘಟನೆಗಳು ಹಾಗೂ ಮಹಾರಾಷ್ಟ್ರ, ಪಂಜಾಬ್‌ನಲ್ಲಿರುವ ಕೃಷಿ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕಿತ್ತು ಎಂದು ಶಿವಸೇನಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.