BJP
ಮುಂಬೈ: ಆಂತರಿಕ ಕಲಹಗಳ ಪರಿಣಾಮ ಶಿವಸೇನೆ ಒಡೆದು ಹೋಯಿತು ಇದರಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಯಾವುದೇ ಪಾತ್ರವಿಲ್ಲ ಎಂದು ಬಿಜೆಪಿ ನಾಯಕ ಪರಿಣಯ್ ಫುಕೆ ಬುಧವಾರ ಹೇಳಿದರು.
ಇಲ್ಲಿನ ವಿಧಾನ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅವಿಭಜಿತ ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ ಅವರ ಆಡಳಿತದ ವೈಖರಿ, ಹಿರಿಯರನ್ನು ಕಡೆಗಣಿಸಿದ ಪರಿಣಾಮ ಪಕ್ಷದಲ್ಲಿನ ಹಲವು ನಾಯಕರ ಅಸಮಾಧಾನಕ್ಕೆ ಕಾರಣವಾಯಿತು. ಉದ್ಧವ್ ಠಾಕ್ರೆ ಅವರಿಂದ ಬೇಸತ್ತು ಏಕನಾಥ್ ಶಿಂಧೆ ನೇತೃತ್ವದಲ್ಲಿ ಹಲವರು ಪಕ್ಷದಿಂದ ಹೊರ ಬಂದರು. ಇದಕ್ಕೆ ದೇವೇಂದ್ರ ಫಡಣವೀಸ್ ಅವರನ್ನು ದೂಷಿಸುವುದು ಅನ್ಯಾಯ ಎಂದರು.
ಸತ್ಯವೇನೆಂದರೆ, ಸಂಜಯ್ ರಾವತ್ ಅವರಂತಹ ನಾಯಕರು ಶಿವಸೇನೆಯಲ್ಲಿ ಉಸಿರುಗಟ್ಟಿಸುವ ವಾತಾವರಣವನ್ನು ಸೃಷ್ಟಿಸಿದರು. ಅವರ ನಡವಳಿಕೆಯೇ ಶಿಂಧೆ ಅವರಂತಹ ನಿಷ್ಠಾವಂತ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು. ಆದರೆ ಅವರಿಗೆ ಬಿಜೆಪಿಯತ್ತ ಬೆರಳು ತೋರಿಸುವುದು ಸುಲಭವಾಯಿತು, ಆದರೆ ನಿಜವಾದ ಕಾರಣಗಳು ಶಿವಸೇನೆಯ (ಅವಿಭಜಿತ) ನಾಯಕತ್ವ ಮತ್ತು ಆಂತರಿಕ ಕಲಹಗಳಲ್ಲಿವೆ ಎಂದು ಫುಕೆ ಹೇಳಿದರು.
ಏಕನಾಥ್ ಶಿಂಧೆ ಸೇರಿದಂತೆ 39 ಶಾಸಕರು ಉದ್ಧವ್ ವಿರುದ್ಧ ಬಂಡಾಯವೆದ್ದು 2022ರ ಜೂನ್‌ನಲ್ಲಿ ಪಕ್ಷದಿಂದ ಹೊರ ಬಂದರು. ಇದು ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾಯಿತು. ನಂತರ ಬಿಜೆಪಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿದ ಶಿಂಧೆ ಮುಖ್ಯಮಂತ್ರಿಯಾದರು.
ಚುನಾವಣಾ ಆಯೋಗವು ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಬಳಸಲು ಅನುಮತಿ ನೀಡಿತು, ಆದರೆ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಗೆ ಜ್ವಲಿಸುವ ಟಾರ್ಚ್ ಅನ್ನು ಚಿಹ್ನೆಯಾಗಿ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.