ADVERTISEMENT

ಹಾಜರಾತಿಯಲ್ಲಿ ಉದಾಸಿ, ಕಟೀಲ್‌, ಎಸ್‌ಪಿಎಂ ಮುಂದೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 16:34 IST
Last Updated 30 ಏಪ್ರಿಲ್ 2019, 16:34 IST
   

ನವದೆಹಲಿ: ಲೋಕಸಭೆಯ ಹಾಲಿ ಸದಸ್ಯರಲ್ಲಿ ರಾಜ್ಯದ ಶಿವಕುಮಾರ ಉದಾಸಿ, ನಳಿನ್‌ಕುಮಾರ್‌ ಕಟೀಲ್‌ ಹಾಗೂ ಎಸ್‌.ಪಿ. ಮುದ್ದಹನುಮೇಗೌಡ ಅವರು ಕಲಾಪದಲ್ಲಿ ಅತಿ ಹೆಚ್ಚು ದಿನ ಭಾಗವಹಿಸಿದವರಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.

ಒಟ್ಟು 312 ದಿನ ನಡೆದಿರುವ 16ನೇಲೋಕಸಭೆಯ ಕಲಾಪದ ವೇಳೆ ಲಿಖಿತ ರೂಪದ ಪ್ರಶ್ನೆಗಳನ್ನು ಅತಿ ಹೆಚ್ಚು ಕೇಳಿದವರಲ್ಲಿ ಶೋಭಾ ಕರಂದ್ಲಾಜೆ, ಬಿ.ವಿ. ನಾಯಕ್‌ ಮತ್ತು ಪ್ರತಾಪಸಿಂಹ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.

ಒಟ್ಟು 291 ದಿನ ಕಲಾಪದಲ್ಲಿ ಭಾಗವಹಿಸಿರುವ ಉದಾಸಿ, 480 ಪ್ರಶ್ನೆಗಳನ್ನು ಕೇಳಿದ್ದಲ್ಲದೆ, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ನಡೆದಿದ್ದ 143 ಚರ್ಚೆಗಳಲ್ಲೂ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ADVERTISEMENT

ಬಳ್ಳಾರಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವ ಮೊದಲು ಇದ್ದ ಕಾಂಗ್ರೆಸ್‌ನ 9 ಜನ ಲೋಕಸಭಾ ಸದಸ್ಯರ ಪೈಕಿ ಚಿಕ್ಕೋಡಿಯ ಪ್ರಕಾಶ ಹುಕ್ಕೇರಿ ಹಾಗೂ ರಾಯಚೂರಿನ ಬಿ.ವಿ. ನಾಯಕ್‌ ಅವರನ್ನು ಹೊರತುಪಡಿಸಿದಂತೆ ಮಿಕ್ಕವರೆಲ್ಲ 200ಕ್ಕೂ ಅಧಿಕ ದಿನ ಕಲಾಪದಲ್ಲಿ ಭಾಗವಹಿಸಿದ್ದಾರೆ.

ಕೇವಲ 194 ದಿನ ಕಲಾಪದಲ್ಲಿ ಭಾಗವಹಿಸಿದ್ದರೂ, ಬಿ.ವಿ. ನಾಯಕ್‌ ಅವರು ಕಾಂಗ್ರೆಸ್‌ ಸದಸ್ಯರ ಪೈಕಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದವರಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅಲ್ಲದೆ, ವಿವಿಧ ರೀತಿಯ 11 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.

ಕಳೆದ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಸತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಬಳ್ಳಾರಿಯ ಬಿ. ಶ್ರೀರಾಮುಲು ಅವರ ಹಾಜರಾತಿ ಶೇ 52 ರಷ್ಟಿದ್ದು, 576 ಪ್ರಶ್ನೆಗಳನ್ನು ಕೇಳಿದ್ದರು.

ಇದೀಗ ರಾಜ್ಯದಲ್ಲಿ ಸಚಿವರಾಗಿರುವ ಜೆಡಿಎಸ್‌ನ ಮಂಡ್ಯ ಸಂಸದ ಸಿ.ಎಸ್‌. ಪುಟ್ಟರಾಜು ಶೇ 55ರಷ್ಟು ಹಾಜರಾತಿ ಹೊಂದಿದ್ದು, 580 ಪ್ರಶ್ನೆಗಳನ್ನು ಕೇಳಿದ್ದಾರೆ.

ರಾಜ್ಯದ ಅನಂತಕುಮಾರ್‌, ಡಿ.ವಿ. ಸದಾನಂದಗೌಡ, ಜಿ.ಎಂ. ಸಿದ್ದೇಶ್ವರ, ರಮೇಶ ಜಿಗಜಿಣಗಿ ಹಾಗೂ ಅನಂತಕುಮಾರ್‌ ಹೆಗಡೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಉಪ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜಯಿಸಿದ್ದ ಎಲ್‌.ಆರ್‌. ಶಿವರಾಮೇಗೌಡ ಕಳೆದ ಬಜೆಟ್‌ ಅಧಿವೇಶನದ ಸಂದರ್ಭ 7 ದಿನ ಕಲಾಪದಲ್ಲಿ ಪಾಲ್ಗೊಂಡಿದ್ದು, 64 ಪ್ರಶ್ನೆಗಳನ್ನು ಕೇಳಿದ್ದಾರೆ.

**

312 – ಕಲಾಪ ನಡೆದ ದಿನಗಳ ಸಂಖ್ಯೆ

ಗರಿಷ್ಠ ಹಾಜರಿ

1. ಶಿವಕುಮಾರ ಉದಾಸಿ 291 ದಿನ

2. ನಳಿನ್‌ಕುಮಾರ್‌ ಕಟೀಲ್‌ 287 ದಿನ

3. ಎಸ್‌.ಪಿ. ಮುದ್ದಹನುಮೇಗೌಡ 286 ದಿನ

ಹೆಚ್ಚು ಪ್ರಶ್ನೆ ಕೇಳಿದವರು

1. ಶೋಭಾ ಕರಂದ್ಲಾಜೆ 736 ಪ್ರಶ್ನೆಗಳು

2. ಬಿ.ವಿ. ನಾಯಕ್‌ 689ಪ್ರಶ್ನೆಗಳು

3. ಪ್ರತಾಪಸಿಂಹ 685ಪ್ರಶ್ನೆಗಳು

*ತುಮಕೂರು ಕ್ಷೇತ್ರದಿಂದ ಟಿಕೆಟ್‌ ವಂಚಿತರಾಗಿರುವ ಎಸ್‌.ಪಿ. ಮುದ್ದಹನುಮೇಗೌಡ ಕಾಂಗ್ರೆಸ್‌ ಪರ ಅತಿ ಹೆಚ್ಚು ದಿನ ಕಲಾಪದಲ್ಲಿ (286) ಭಾಗವಹಿಸಿದ್ದು, 642 ಪ್ರಶ್ನೆಗಳನ್ನು ಕೇಳಿದ್ದಾರೆ. 116 ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ

* ಕ್ಷೇತ್ರಗಳಲ್ಲಿನ ಸಮಸ್ಯೆಗಳ ಕುರಿತು ಪ್ರಸ್ತಾಪಿಸಲು ಇರುವ ಶೂನ್ಯವೇಳೆಯ ಅವಕಾಶವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡವರಲ್ಲೂ ಕಾಂಗ್ರೆಸ್‌ ಸದಸ್ಯರು ಮುಂಚೂಣಿಯಲ್ಲಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.