ADVERTISEMENT

ಕರಡಿ ಆಹಾರದಲ್ಲಿ ಪ್ಲಾಸ್ಟಿಕ್‌ ಪಾಲೇ ಹೆಚ್ಚು

ವೈಲ್ಡ್‌ಲೈಫ್ ಎಸ್‌ಒಎಸ್‌ ಅಧ್ಯಯನ ವರದಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 22:30 IST
Last Updated 19 ಡಿಸೆಂಬರ್ 2022, 22:30 IST
ಕಸದಲ್ಲಿ ಆಹಾರ ಹುಡುಕುತ್ತಿರುವ ಹಿಮಾಲಯದ ಕಂದು ಕರಡಿಗಳು
ಕಸದಲ್ಲಿ ಆಹಾರ ಹುಡುಕುತ್ತಿರುವ ಹಿಮಾಲಯದ ಕಂದು ಕರಡಿಗಳು   

ಶ್ರೀನಗರ: ಕಾಶ್ಮೀರದಲ್ಲಿ ಕಂಡುಬರುವ ಕಂದು ಕರಡಿಗಳ ಆಹಾರದಲ್ಲಿ ಶೇ 75ರಷ್ಟು ಪ್ಲಾಸ್ಟಿಕ್, ಚಾಕೋಲೆಟ್, ಬಿರಿಯಾನಿ ಮೊದಲಾದ ಅಂಶಗಳೇ ತುಂಬಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಇವುಗಳ ಬಹುಪಾಲು ತಿನಿಸು, ಆಹಾರ ತ್ಯಾಜ್ಯವನ್ನುಆಶ್ರಯಿಸಿದ್ದು,ಕರಡಿಗಳು ಇದಕ್ಕೆ ಒಗ್ಗಿಕೊಂಡಿವೆ.

ಜಮ್ಮು ಕಾಶ್ಮೀರ ವನ್ಯಜೀವಿ ರಕ್ಷಣಾ ಇಲಾಖೆಯ ಆಶ್ರಯದ ಅಡಿಯಲ್ಲಿ ವೈಲ್ಡ್‌ಲೈಫ್ ಎಸ್‌ಒಎಸ್‌ ಸಂಸ್ಥೆಯು 2021ರ ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಈ ಅಧ್ಯಯನ ನಡೆಸಿದೆ. ಹಿಮಾಲಯ ಕಂದು ಕರಡಿಗಳ ಆಹಾರ ಮಾದರಿಗಳ ಕುರಿತು ವಿಸ್ತೃತ ಮಾಹಿತಿ ಸಂಗ್ರಹಿಸಲಾಗಿದೆ.

‘ಬಳಸಿ ಎಸೆದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಹಾಲಿನಪುಡಿ, ಚಾಕೋಲೆಟ್ ಕವರ್‌ಗಳು ಕಂದು ಕರಡಿಗಳ ಹೊಟ್ಟೆ ಸೇರುತ್ತಿವೆ. ಹಿಮಾಲಯದ ಆಲ್ಫೈನ್ ಹುಲ್ಲುಗಾವಲಿಗೆ ಮಾತ್ರ ಸೀಮಿತವಾಗಿರುವ ಹಿಮಾಲಯದ ಕಂದು ಕರಡಿಗಳ ಕುರಿತು ಸೂಕ್ತ ಸಂಶೋಧನೆಯೇ ನಡೆದಿಲ್ಲ’ ಎಂದು ವರದಿ ಹೇಳಿದೆ.

ADVERTISEMENT

ಒತ್ತುವರಿ, ಪ್ರವಾಸೋದ್ಯಮ, ಜಾನುವಾರು ಮೇಯಿಸುವ ಪ್ರವೃತ್ತಿ ಮೊದಲಾದ ಮನುಷ್ಯ ನಿರ್ಮಿತ ಒತ್ತಡಗಳಿಂದಾಗಿ ಹಿಮಾಲಯದ ಕಂದು ಕರಡಿಗಳ ಸಂಖ್ಯೆ ಕಳೆದ ಒಂದು ಶತಮಾನದಲ್ಲಿ ಕುಸಿದಿದೆ. ಈಗ 500ರಿಂದ 750 ಕಂದು ಕರಡಿಗಳು ಇರಬಹುದು ಎಂಬ ಅಂದಾಜು ಇದೆ. ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್‌ನ (ಐಯುಸಿಎ) ಕೆಂಪು ಪಟ್ಟಿಯ (ತೀವ್ರವಾಗಿ ಅಳಿವಿನಂಚಿನಲ್ಲಿರುವ) ಪ್ರಾಣಿಗಳ ವರ್ಗಕ್ಕೆ ಹಿಮಾಲಯದ ಕಂದು ಕರಡಿಗಳನ್ನು ಸೇರಿಸಲಾಗಿದೆ.

ಕಾಶ್ಮೀರದ ಅಪರೂಪದ ಕರಡಿ ಪ್ರಭೇದದ ಸಂರಕ್ಷಣೆಗೆ ನೆರವಾಗುವ ನಿಟ್ಟಿನಲ್ಲಿ ವೈಲ್ಡ್‌ಲೈಫ್ ಎಸ್‌ಒಎಸ್ ಅಧ್ಯಯನ ಕೈಗೊಂಡಿತ್ತು. ಕಂದು ಕರಡಿಗಳ ಆವಾಸಸ್ಥಾನ ಎಂದು ಕರೆಯಲಾಗುವ ಥಜೀವಾಸ್ ವನ್ಯಜೀವಿ ಅಭಯಾರಣ್ಯ, ಸೋನ್‌ಮಾರ್ಗ್‌, ಲಕ್ಷಪಥರಿ, ನೀಲಗ್ರಥ ಮತ್ತು ಸರ್ಬಾಲ್ ಗ್ರಾಮಗಳ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಲಾಗಿದೆ.

408 ಕರಡಿಗಳ ಪೈಕಿ 86 ಕರಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಇನ್ನೂ ಕೆಲವು ಕರಡಿಗಳಲ್ಲಿ ಗಾಜಿನ ಅಂಶ ಪತ್ತೆಯಾಗಿದೆ.‘ಎತ್ತರದ ಭೂಪ್ರದೇಶಗಳಲ್ಲಿ ವಾಸಿಸುತ್ತಿದ್ದ ಇವು ಎರಡು ದಶಕಗಳಿಂದ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಆಹಾರ ಅರಸಿ ಕೆಳಗಿನ ಪ್ರದೇಶಕ್ಕೆ ಬರುತ್ತಿರುವುದು ಕಂಡುಬಂದಿದೆ’ ಎಂದು ಸಂಸ್ಥೆಯ ಯೋಜನಾ ವಿಭಾಗದ ವ್ಯವಸ್ಥಾಪಕಿ ಹಾಗೂ ಶಿಕ್ಷಣ ಅಧಿಕಾರಿ
ಆಲಿಯಾ ಮಿರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.