ADVERTISEMENT

ಸಲ್ಮಾನ್ ಖಾನ್‌ ಮನೆಯ ಹೊರಗೆ ಗುಂಡಿನ ದಾಳಿ ಪ್ರಕರಣ: ಮೂವರ ತೀವ್ರ ವಿಚಾರಣೆ

ಪಿಟಿಐ
Published 23 ಏಪ್ರಿಲ್ 2024, 12:23 IST
Last Updated 23 ಏಪ್ರಿಲ್ 2024, 12:23 IST
ಸಲ್ಮಾನ್ ಖಾನ್‌
ಸಲ್ಮಾನ್ ಖಾನ್‌   

ಮುಂಬೈ: ಬಾಲಿವುಡ್ ನಟ ಸಲ್ಮಾನ್‌ ಖಾನ್‌ ನಿವಾಸದ ಬಳಿ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ತನಿಖೆಗೆ ಒಳಪಡಿಸಿದ್ದಾರೆ.

ಇಬ್ಬರು ದುಷ್ಕರ್ಮಿಗಳು ನಟ ಸಲ್ಮಾನ್‌ ಖಾನ್‌ ಅವರ ತೋಟದ ಮನೆ ಇರುವ ನವಿ ಮುಂಬೈನ ಪನ್ವೆಲ್‌ನಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. 

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಾಡಿಗೆ ಮನೆಯ ಮಾಲೀಕ, ಬೈಕ್‌ನ ಹಿಂದಿನ ಮಾಲೀಕ ಹಾಗೂ ಬೈಕ್‌ ಮಾರಾಟಕ್ಕೆ ನೆರವಾಗಿದ್ದ ಏಜೆಂಟ್‌ನನ್ನು ಈಗ ತನಿಖೆಗೆ ಒಳಪಡಿಸಿದ್ದಾರೆ.

ADVERTISEMENT

ದಾಳಿಕೋರರು ಬಳಸಿದ್ದ ಬೈಕ್, ನಟನ ಮನೆಗೆ ಕೆಲವೇ ಕಿ.ಮೀ ದೂರದ ಮೌಂಟ್‌ ಮೇರಿ ಚರ್ಚ್‌ ಬಳಿ ಪತ್ತೆ ಆಗಿತ್ತು. ಬೈಕ್‌ ಮುಂಬೈನ ಪನ್ವೆಲ್‌ ವಲಯದ ನಿವಾಸಿಯೊಬ್ಬರ ಹೆಸರಲ್ಲಿ ನೋಂದಣಿಯಾಗಿತ್ತು.
ಆದರೆ, ‘ಬೈಕ್ ಅನ್ನು ಈಚೆಗೆ ಬೇರೆಯವರಿಗೆ ಮಾರಾಟ ಮಾಡಿದ್ದೆ ಎಂದು ಮಾಲೀಕ ತಿಳಿಸಿದ್ದಾನೆ’ ಎನ್ನಲಾಗಿದೆ.

ಭಾನುವಾರ ಬೆಳಗಿನ ಜಾವ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಬಾಂದ್ರಾದಲ್ಲಿ ನಟನ ಮನೆಯಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಸಮೀಪ ನಾಲ್ಕು ಸುತ್ತು ಗುಂಡು ಹಾರಿಸಿ, ಪರಾರಿ ಯಾಗಿದ್ದರು. ಘಟನೆಯ ತನಿಖೆಗೆ ಪೊಲೀಸರ 12ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿತ್ತು.

ತನಿಖೆ ಚುರುಕುಗೊಳಿಸಿದ್ದ ಪೊಲೀಸರಿಗೆ ಬೈಕ್, ಪನ್ವೆಲ್‌ ಪ್ರದೇಶದ ನಿವಾಸಿಯೊಬ್ಬರ ಹೆಸರಿನಲ್ಲಿ ನೋಂದಣಿ ಆಗಿರುವುದು ತಿಳಿದುಬಂತು. ಮಾಲೀಕನ ನೆಲೆ ಪತ್ತೆಹಚ್ಚಿದ ಅಪರಾಧ ನಿಗ್ರಹ ದಳದ ತಂಡ ವಿಚಾರಣೆಗೆ ಒಳಪಡಿಸಿತು ಎಂದು ಅಧಿಕಾರಿಯೊಬ್ಬರು
ತಿಳಿಸಿದರು.

ದುಷ್ಕರ್ಮಿಗಳು ಚರ್ಚ್ ಬಳಿ ಬೈಕ್‌ ಬಿಟ್ಟು ಸ್ವಲ್ಪ ದೂರ ನಡೆದುಕೊಂಡು ಹೋಗಿದ್ದಾರೆ. ಬಳಿಕ ಆಟೊ ಮೂಲಕ ಬಾಂದ್ರಾ ರೈಲ್ವೆ ನಿಲ್ದಾಣ ತಲುಪಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಅಲ್ಲಿಂದ ರೈಲು ಹತ್ತಿರುವ ದುಷ್ಕರ್ಮಿಗಳು ನಂತರ ಸಾಂತಾಕ್ರೂಜ್‌ ನಿಲ್ದಾಣದಲ್ಲಿ ಇಳಿದಿದ್ದಾರೆ. ಅಲ್ಲಿಂದ ನಡೆದುಕೊಂಡು ಹೋಗಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧ ಈ ವಲಯದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಗಳನ್ನು ಪರಿಶೀಲಿಸುತ್ತಿದ್ದಾರೆ. ‘ಈವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ನಡೆಸಿದೆ‘ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು. ಅಪರಿಚಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ ಅನ್ವಯ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.