ADVERTISEMENT

ಸೊಲ್ಲಾ‍ಪುರ: ವಾರಾಂತ್ಯದಲ್ಲಿ ವಾಣಿಜ್ಯ ಅಂಗಡಿ, ಸಂಸ್ಥೆಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 9:46 IST
Last Updated 27 ಮಾರ್ಚ್ 2021, 9:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ: ಮಹಾರಾಷ್ಟ್ರದ ಸೊಲ್ಲಾ‍ಪುರ ಜಿಲ್ಲೆಯಲ್ಲಿ ಶನಿವಾರ ವಾಣಿಜ್ಯ ಮತ್ತು ಅಗತ್ಯವಲ್ಲದ ಸೇವೆಗಳ ಸಂಸ್ಥೆ ಮತ್ತು ಅಂಗಡಿಗಳು ಮುಚ್ಚಿದ್ದವು.

ಸೊಲ್ಲಾಪುರ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ವಾರಾಂತ್ಯದ ಚಟುವಟಿಕೆ ಮೇಲೆ ನಿರ್ಬಂಧ ವಿಧಿಸಲಾಗಿದೆ. ಶನಿವಾರ ಮತ್ತು ಭಾನುವಾರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಸೇವೆಗಳನ್ನು ಮುಚ್ಚುವಂತೆ ಅಲ್ಲಿನ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಆದೇಶಿಸಿತ್ತು.

‘ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿವೆ. ಹಾಗಾಗಿ ನಗರದಲ್ಲಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರ ಭಾಗವಾಗಿ ವಾರಾಂತ್ಯದಲ್ಲಿ ಅಗತ್ಯವಲ್ಲದ ಸೇವೆಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ’ ಎಂದು ಸೊಲ್ಲಾ‍ಪುರ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

‘ಮಾರುಕಟ್ಟೆಯಲ್ಲಿ ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ವಾರದ ಇತರೆ ದಿನಗಳಲ್ಲಿ ಎಲ್ಲಾ ಅಂಗಡಿಗಳಿಗೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆವರೆಗೆ ತೆರೆದಿರಲು ಅನುಮತಿ ನೀಡಲಾಗಿದೆ’ ಎಂದು ಅವರು ಹೇಳಿದರು.

ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಶೇಕಡ 50 ರಷ್ಟು ಸಾಮರ್ಥ್ಯದೊಂದಿಗೆ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಶಬ್-ಎ-ಬರಾತ್ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಜನರಲ್ಲಿ ಸ್ಥಳೀಯ ಆಡಳಿತ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.