ADVERTISEMENT

ಕಾನೂನು ಸಚಿವರು ಆಡಿದ ಮಾತಿಗೆ ಕೋರ್ಟ್‌ನಿಂದ ಬಲವಾದ ವಿರೋಧ

ಕಾನೂನು ಸಚಿವರು ಆಡಿದ ಮಾತಿಗೆ ಕೋರ್ಟ್‌ನಿಂದ ಬಲವಾದ ವಿರೋಧ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 21:22 IST
Last Updated 28 ನವೆಂಬರ್ 2022, 21:22 IST
   

ನವದೆಹಲಿ: ಕೊಲಿಜಿಯಂ ವ್ಯವಸ್ಥೆ ಕುರಿತು ಕಾನೂನು ಸಚಿವ ಕಿರಣ್‌ ರಿಜಿಜು ಆಡಿದ ಮಾತಿಗೆ ಸುಪ್ರೀಂ ಕೋರ್ಟ್ ಬಲವಾದ ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರವು 2014ರಲ್ಲಿ ರೂಪಿಸಿದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವು (ಎನ್‌ಜೆಎಸಿ) ಜಾರಿಗೆ ಬರಲಿಲ್ಲ ಎಂಬ ಕಾರಣಕ್ಕೆ ಕೊಲಿಜಿಯಂನ ಶಿಫಾರಸುಗಳನ್ನು ತಡೆ ಹಿಡಿಯಲಾಗುತ್ತಿದೆಯೇ ಎಂದು ಪ್ರಶ್ನಿಸಿದೆ.

ಶಿಫಾರಸನ್ನು ಪುನರುಚ್ಚರಿಸಿದರೆ ಸರ್ಕಾರವು ಅದಕ್ಕೆ ಒಪ್ಪಿಗೆ ನೀಡಲೇಬೇಕು. ಕಾನೂನು ಪ್ರಕಾರ, ಅಲ್ಲಿಗೆ ಆ ವಿಚಾರವು ಕೊನೆಗೊಳ್ಳುತ್ತದೆ ಎಂದು ನ್ಯಾಯಮೂರ್ತಿ ಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಅಭಯ್‌ ಎಸ್‌. ಓಕಾ ಅವರ ಪೀಠವು ಸೋಮವಾರ ಹೇಳಿದೆ.

ಬೆಂಗಳೂರು ವಕೀಲರ ಸಂಘವು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು. ಕಿರಣ್‌ ರಿಜಿಜು ಅವರು ನ್ಯಾಯಮೂರ್ತಿ ಗಳ ನೇಮಕ ಕುರಿತು ಆಡಿದ್ದ ಮಾತುಗಳನ್ನು ಹಿರಿಯ ವಕೀಲ ವಿಕಾಸ್‌ ಸಿಂಗ್‌ ಅವರು ಪೀಠದ ಗಮನಕ್ಕೆ ತಂದರು.

ADVERTISEMENT

‘ನಮ್ಮ ಆಕ್ರೋಶವನ್ನು ನಾವು ವ್ಯಕ್ತಪಡಿಸಿದ್ದೇವೆ. ಎನ್‌ಜೆಎಸಿ ಜಾರಿಗೆ ಬಾರದಿರುವ ಕುರಿತು ಸರ್ಕಾರಕ್ಕೆ ಅಸಮಾಧಾನ ಇದ್ದ ಹಾಗೆ ಕಾಣಿಸುತ್ತಿದೆ. ಶಿಫಾರಸು ಮಾಡಿದ ಹೆಸರುಗಳನ್ನು ತಡೆ ಹಿಡಿಯಲು ಅದು ಕಾರಣವೇ’ ಎಂದು ಪೀಠವು ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರನ್ನು ಪ್ರಶ್ನಿಸಿದೆ.

ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾದ ಕಾಲಮಿತಿಯನ್ನು ಮೂವರು ನ್ಯಾಯಮೂರ್ತಿಗಳ ಪೀಠವು ನಿಗದಿ ಮಾಡಿತ್ತು. ಅದನ್ನು ಪಾಲಿಸಲೇಬೇಕು ಎಂದು ಪೀಠವು ಹೇಳಿದೆ.

ಸಂವಿಧಾನಕ್ಕೆ 99ನೇ ತಿದ್ದುಪಡಿಯ ಮೂಲಕ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ಕೇಂದ್ರ ಸರ್ಕಾರವು 2014ರಲ್ಲಿ ಜಾರಿಗೆ ತಂದಿತ್ತು. ಆದರೆ, ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ 2015ರಲ್ಲಿ ರದ್ದುಪಡಿಸಿತ್ತು. ಇದರಿಂದಾಗಿ ಹಿಂದೆ ಇದ್ದ ಕೊಲಿಜಿಯಂ ವ್ಯವಸ್ಥೆಯೇ ಜಾರಿಗೆ ಬಂದಿದೆ.

ಎರಡು ತಿಂಗಳುಗಳಿಂದ ಎಲ್ಲವೂ ಸ್ಥಗಿತಗೊಂಡಿದೆ. ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿಗಳ ನೇಮಕ ಆಗ ಬೇಕಿದೆ. ದಯವಿಟ್ಟು ಸಮಸ್ಯೆಯನ್ನು ಪರಿಹರಿಸಿ. ನ್ಯಾಯಾಲಯದ ಕಡೆ ಯಿಂದ ನಿರ್ಧಾರ ಕೈಗೊಳ್ಳುವಂತೆ ಮಾಡಬೇಡಿ ಎಂದು ಪೀಠವು ಹೇಳಿತು.

ಕೆಲವು ಹೆಸರುಗಳು ಒಂದೂವರೆ ವರ್ಷದಿಂದ ಬಾಕಿ ಇವೆ. ಸರ್ಕಾರವು ನೇಮಕಾತಿ ವ್ಯವಸ್ಥೆಯನ್ನೇ ವ್ಯರ್ಥಗೊಳಿಸಲು ಯತ್ನಿಸುತ್ತಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿಯೇ, ಕೆಲವು ವಕೀಲರು ನೇಮಕಕ್ಕೆ ಕೊಟ್ಟ ಸಮ್ಮತಿಯನ್ನು ವಾಪಸ್‌ ತೆಗೆದುಕೊಳ್ಳುತ್ತಿದ್ದಾರೆ. ಸೇವಾ ಹಿರಿತನವನ್ನು ಕೂಡ ಗಮನದಲ್ಲಿ ಇರಿಸಿಕೊಂಡು ಹೆಸರುಗಳನ್ನು ಶಿಫಾರಸು ಮಾಡಲಾಗುತ್ತದೆ. ಆದರೆ, ಕೆಲವು ಹೆಸರುಗಳಿಗೆ ಮಾತ್ರ ಒಪ್ಪಿಗೆ ಕೊಟ್ಟು ಕೆಲವು ಹೆಸರುಗಳನ್ನು ಬಾಕಿ ಉಳಿಸಿಕೊಳ್ಳುವುದರಿಂದ ನ್ಯಾಯಾಂಗದಲ್ಲಿನ ಸೇವಾ ಹಿರಿತನವು ಅಸ್ತವ್ಯಸ್ತವಾಗುತ್ತದೆ ಎಂದೂ ಪೀಠವು ಆಕ್ರೋಶ ವ್ಯಕ್ತಪಡಿಸಿದೆ.

ಸುಪ‍್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ನಾಲ್ವರು ಅತಿ ಹಿರಿಯ ನ್ಯಾಯಮೂರ್ತಿಗಳಿರುವ ಕೊಲಿಜಿಯಂ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡುತ್ತದೆ. ಈ ಶಿಫಾರಸುಗಳಿಗೆ ಕೇಂದ್ರ ಸರ್ಕಾರವು ಅನುಮೋದನೆ ಕೊಡಬೇಕು. 1993ರಲ್ಲಿ ಈ ವ್ಯವಸ್ಥೆ ಜಾರಿಗೆ ಬಂತು.

ಕಿರಣ್‌ ರಿಜಿಜು ಹೇಳಿದ್ದೇನು?

‘ಸರ್ಕಾರವು ಕಡತವನ್ನು ಹಿಡಿದಿಟ್ಟು ಕೊಂಡಿದೆ ಎಂದು ಹೇಳಬೇಡಿ. ಹಾಗಿದ್ದರೆ ನೀವು ಸರ್ಕಾರಕ್ಕೆ ಕಡತ ವನ್ನೇ ಕಳುಹಿಸಬೇಡಿ. ನೀವು ನೇಮಕಾತಿ ಮಾಡಿಕೊಳ್ಳಿ. ಎಲ್ಲವನ್ನೂ ನೀವೇ ನಿರ್ವಹಿಸಿ’ ಎಂದು ಕಾನೂನು ಸಚಿವ ಕಿರಣ್‌ ರಿಜಿಜು ಅವರು ಟಿ.ವಿ. ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಇದೇ ಮೊದಲಲ್ಲ

ನೇಮಕಾತಿ ವಿಚಾರದಲ್ಲಿ ಸರ್ಕಾರದ ವರ್ತನೆಯ ಕುರಿತು ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದು ಇದೇ ಮೊದಲಲ್ಲ. ನ್ಯಾಯಮೂರ್ತಿ ಹುದ್ದೆಗೆ ನೇಮಕಕ್ಕಾಗಿ ಶಿಫಾರಸು ಮಾಡಿದ ಹೆಸರುಗಳಿಗೆ ಅನುಮೋದನೆ ನೀಡಲು ವಿಳಂಬ ಮಾಡುವುದು ಸರಿಯಲ್ಲ ಎಂದು ನವೆಂಬರ್‌ 11ರಂದೂ ಹೇಳಿತ್ತು.

ಕಾನೂನು ಸಚಿವಾಲಯದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯ ದರ್ಶಿಗೆ ನೋಟಿಸ್ ನೀಡಿ, ಪ್ರತಿಕ್ರಿಯೆ ನೀಡಲು ಸೂಚಿಸಿತ್ತು. ಕೊಲಿಜಿಯಂ 11 ಹೆಸರುಗಳನ್ನು ಶಿಫಾರಸು ಮಾಡಿತ್ತು. ಮತ್ತೆ, ಅವೇ ಹೆಸರುಗಳನ್ನು ಪುನರುಚ್ಚರಿಸಲಾಗಿತ್ತು.

ಕೊಲಿಜಿಯಂ ಸರ್ವಾನುಮತದಿಂದ ಮರುಶಿಫಾರಸು ಮಾಡಿದ ಹೆಸರುಗಳಿಗೆ ಮೂರರಿಂದ ನಾಲ್ಕು ವಾರಗಳಲ್ಲಿ ಸರ್ಕಾರವು ಒಪ್ಪಿಗೆ ಕೊಡ ಬೇಕು ಎಂದು ಕಳೆದ ವರ್ಷ ಏಪ್ರಿಲ್‌ನಲ್ಲಿ ಕೋರ್ಟ್ ಹೇಳಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.