ADVERTISEMENT

ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಈವರೆಗೂ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತಾ?

ಏಜೆನ್ಸೀಸ್
Published 13 ಫೆಬ್ರುವರಿ 2021, 10:06 IST
Last Updated 13 ಫೆಬ್ರುವರಿ 2021, 10:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸೂರತ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶಾದ್ಯಂತ ದೇಣಿಗೆ ಸಂಗ್ರಹ ನಡೆಸುತ್ತಿದ್ದು, ಟ್ರಸ್ಟ್ ಖಾತೆಗೆ ಈವರೆಗೂ ₹1,511 ಕೋಟಿ ಸಂಗ್ರಹವಾಗಿರುವುದಾಗಿ ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ ಶುಕ್ರವಾರ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ಇಡೀ ರಾಷ್ಟ್ರವು ಹಣವನ್ನು ದಾನ ಮಾಡುತ್ತಿದೆ. ನಮ್ಮ ದೇಣಿಗೆ ಸಂಗ್ರಹ ಕಾರ್ಯದ ಮೂಲಕ ದೇಶದಾದ್ಯಂತ 4 ಲಕ್ಷ ಗ್ರಾಮಗಳು ಮತ್ತು 11 ಕೋಟಿ ಕುಟುಂಬಗಳನ್ನು ತಲುಪುವ ಗುರಿ ಇಟ್ಟುಕೊಂಡಿದ್ದೇವೆ. ಅಭಿಯಾನದ ಅಂಗವಾಗಿ ನಾನು ಸೂರತ್‌ನಲ್ಲಿದ್ದೇನೆ. ಜನರು ಟ್ರಸ್ಟ್‌ಗೆ ಕೊಡುಗೆ ನೀಡುತ್ತಿದ್ದಾರೆ. 492 ವರ್ಷಗಳ ನಂತರ ಧರ್ಮಕ್ಕಾಗಿ ಏನಾದರೂ ಮಾಡಲು ಜನರಿಗೆ ಇಂಥ ಅಪರೂಪದ ಅವಕಾಶ ಸಿಕ್ಕಿದೆ ಎಂದು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ದೇಗುಲ ನಿರ್ಮಾಣಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಜನವರಿ 15ರಂದು ದೇಣಿಗೆ ಸಂಗ್ರಹ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಫೆಬ್ರವರಿ 27ರ ವರೆಗೂ ಇದು ಮುಂದುವರಿಯಲಿದೆ. ಫೆಬ್ರುವರಿ 11ರ ಗುರುವಾರ ಸಂಜೆಯವರೆಗೂ ₹1,511 ಕೋಟಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ನವೆಂಬರ್ 9, 2019ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದ ಐವರು ನ್ಯಾಯಾಧೀಶರು ರಾಮ್ ಲಲ್ಲಾ ಪರವಾಗಿ ತೀರ್ಪು ನೀಡಿದರು. ರಾಮಮಂದಿರ ದೇಗುಲದ ಮೇಲ್ವಿಚಾರಣೆಗಾಗಿ ಟ್ರಸ್ಟ್‌ ರಚಿಸಲು, ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರಕ್ಕೆ ಸೂಚಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಗೆ 2020ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅನ್ನು ರಚಿಸಿದರು. ಆಗಸ್ಟ್ 5, 2020ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.