ADVERTISEMENT

ಸ್ವಜನ ಪಕ್ಷಪಾತ ನಿಲ್ಲಿಸಿ: ಬಿಜೆಪಿ ಮುಖ್ಯಮಂತ್ರಿಗಳಿಗೆ ಮೋದಿ ಉಪದೇಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2018, 4:27 IST
Last Updated 14 ಸೆಪ್ಟೆಂಬರ್ 2018, 4:27 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಬಿಜೆಪಿ ಆಡಳಿತರೂಢ ರಾಜ್ಯಗಳಲ್ಲಿ ಸಚಿವ ಸಂಪುಟಕ್ಕೆ ಸಂಬಂಧಿಕರನ್ನು ಸೇರಿಸುವುದು, ಚುನಾವಣೆ ಬಂದಾಗ ಸಂಬಂಧಿಕರಿಗೆ ಟಿಕೆಟ್ ನೀಡುವುದು ಹೀಗೆ ಸ್ವಜನ ಪಕ್ಷಪಾತ ಮಾಡುವುದನ್ನು ನಿಲ್ಲಿಸಿ ಎಂದು ಬಿಜೆಪಿ ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ಕಳೆದ ತಿಂಗಳು ಬಿಜೆಪಿಯ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಮೋದಿ ಈ ಮಾತುಗಳನ್ನಾಡಿದ್ದಾರೆಎಂದು ಬಿಜೆಪಿಯ ಇಬ್ಬರು ನಾಯಕರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಅಧಿಕಾರದಲ್ಲಿರುವಾಗ ಕುಟುಂಬಗಳ ಮೇಲೆ ಪ್ರೀತಿ ಇನ್ನಷ್ಟು ಹೆಚ್ಚಿರುತ್ತದೆ.ಇದನ್ನೆಲ್ಲಾ ನಿಯಂತ್ರಣದಲ್ಲಿರಿಸಿಕೊಳ್ಳಬೇಕು.ನಾವು ಈ ರೀತಿ ಮಾಡಿದರೆ ಕಾಂಗ್ರೆಸ್‍ನ ಕುಟುಂಬ ರಾಜಕಾರಣದ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಮಧ್ಯಪ್ರದೇಶದಲ್ಲಿ ನಾಯಕರು ತಮ್ಮ ಕುಟುಂಬದ ಸದಸ್ಯರಿಗೇ ಚುನಾವಣಾ ಟಿಕೆಟ್ ನೀಡಿದ ಕಾರಣ ಸೋಲುವಂತಾಯಿತು ಎಂದು ಮೋದಿ ಹೇಳಿರುವುದಾಗಿ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಈ ವರ್ಷ ಮಧ್ಯಪ್ರದೇಶ, ಛತ್ತೀಸ್‍ಗಢ, ರಾಜಸ್ತಾನ, ಮಿಂಜೋರಾಂನಲ್ಲಿ ಚುನಾವಣೆ ನಡೆಯಲಿದೆ. ತೆಲಂಗಾಣದಲ್ಲಿಯೂ ಚುನಾವಣೆ ನಡೆಯುವ ಸಾಧ್ಯತೆ ಇದೆ,
ಹೀಗಿರುವಾಗ ಕನಿಷ್ಠ 24 ಬಿಜೆಪಿ ನಾಯಕರು ತಮ್ಮ ಕುಟುಂಬದವರಿಗಾಗಿ ಟಿಕೆಟ್ ನೀಡುವಂತೆ ಬೇಡುತ್ತಿದ್ದಾರೆಎಂದು ಬಿಜೆಪಿ ಕಚೇರಿಯ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ADVERTISEMENT

ಏತನ್ಮಧ್ಯೆ, ಮುಖ್ಯಮಂತ್ರಿಗಳು ವಿದೇಶ ಪ್ರವಾಸಕೈಗೊಳುವ ಮುನ್ನ ನಮಗೆ ತಿಳಿಸಿ ಎಂದಿದ್ದಾರೆ ಮೋದಿ.ಮುಖ್ಯಮಂತ್ರಿಗಳು ವಿದೇಶ ಪ್ರವಾಸ ಕೈಗೊಳ್ಳುವುದಕ್ಕೆ ಯಾವುದೇ ನಿರ್ಬಂಧವಿಲ್ಲ.ಆದರೆ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಲ್ಲಿ ಸರ್ಕಾರದ ಕಾರ್ಯಗಳತ್ತ ಮಾತ್ರ ಹೆಚ್ಚು ಗಮನ ನೀಡಿ. ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ, ಮುಖ್ಯಮಂತ್ರಿಗಳು ವಿದೇಶ ಪ್ರವಾಸದ ಉದ್ದೇಶ, ಯಾವ ದೇಶಕ್ಕೆ ಹೋಗುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಬೇಕು ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.