ADVERTISEMENT

ಕಾಸರಗೋಡಿನಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರ ಕೊಲೆ; ಕೇರಳ ಬಂದ್‌

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 4:55 IST
Last Updated 18 ಫೆಬ್ರುವರಿ 2019, 4:55 IST
ಕೊಲೆಯಾದ ಯುವ ಕಾಂಗ್ರೆಸ್‌ ಕಾರ್ಯಕರ್ತರು
ಕೊಲೆಯಾದ ಯುವ ಕಾಂಗ್ರೆಸ್‌ ಕಾರ್ಯಕರ್ತರು   

ತಿರುವನಂತಪುರ:ಕಾಸರಗೋಡು ಜಿಲ್ಲೆಯ ಪೆರಿಯದಲ್ಲಿ ಭಾನುವಾರ ರಾತ್ರಿ ನಡೆದಿರುವ ಯುವ ಕಾಂಗ್ರೆಸ್ ಸದಸ್ಯರ ಕೊಲೆ ಖಂಡಿಸಿ ಕೇರಳ ರಾಜ್ಯದಾದ್ಯಂತ ಸೋಮವಾರ ಹರತಾಳ ನಡೆದಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಜನಜೀವನದ ಮೇಲೆ ಪರಿಣಾಮ ಬೀರಿದೆ.

ಯುವ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌(21) ಮತ್ತು ಶರತ್‌ ಲಾಲ್‌(24) ಮೇಲೆ ಸಿಪಿಐ(ಎಂ) ಕಾರ್ಯಕರ್ತರು ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕೊಲೆ ಖಂಡಿಸಿ ವಿರೋಧ ಪಕ್ಷ ಕಾಂಗ್ರೆಸ್‌ ಸೋಮವಾರ 12 ಗಂಟೆ ಕೇರಳ ಬಂದ್‌ಗೆ ಕರೆ ನೀಡಿದೆ.

ಕೃಪೇಶ್‌ ಮತ್ತು ಶರತ್‌ ಪೆರಿಯ ಗ್ರಾಮದಲ್ಲಿನ ಮನೆಗೆ ಮೋಟಾರ್‌ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಅಪರಿಚಿತರು ದಾಳಿ ನಡೆಸಿದ್ದಾರೆ. ಕೃಪೇಶ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಶರತ್‌ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಕಾಂಗ್ರೆಸ್‌ ಮೊದಲಿಗೆ ಕಾಸರಗೋಡಿನಲ್ಲಿ ಮಾತ್ರ ಬಂದ್‌ಗೆ ಕರೆ ನೀಡಿತ್ತಾದರೂ, ಬಳಿಕ ರಾಜ್ಯವ್ಯಾಪಿ ವಿಸ್ತರಿಸುವ ನಿರ್ಧಾರ ಪ್ರಕಟಿಸಿತು.

ಕಾಂಗ್ರೆಸ್‌ ಮತ್ತು ಸಿಪಿಐ(ಎಂ) ಕಾರ್ಯಕರ್ತರ ನಡುವೆ ಹಲವು ದಿನಗಳಿಂದ ತಿಕ್ಕಾಟ ನಡೆಯುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಕೊಲೆ ನಡೆದಿರಬಹುದಾಗಿ ಪೊಲೀಸರು ಶಂಕಿಸಿದ್ದಾರೆ. ಎರಡು ವಾರಗಳ ಹಿಂದೆ, ಕಾಂಗ್ರೆಸ್‌–ಸಿಪಿಐ(ಎಂ) ಕಾರ್ಯಕರ್ತರ ಕಾದಾಟದಲ್ಲಿ ಸಿಪಿಐ(ಎಂ) ಪೆರಿಯ ಘಟಕದ ಕಾರ್ಯದರ್ಶಿ ಪಿ.ಪೀಥಾಂಬರನ್‌ ಹಾಗೂ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದರು. ಈ ಪ್ರಕರಣದ ಸಂಬಂಧ 11 ಮಂದಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು.

’ಸಿಪಿಐ(ಎಂ) ಕಾರ್ಯಕರ್ತರು ಈ ದಾಳಿಯ ಸೂತ್ರಧಾರರಾಗಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯ. ರಾಜಕೀಯ ವಿರೋಧಿಗಳನ್ನು ಮೌನವಾಗಿಸುವ ತಂತ್ರ’ ಎಂದು ಕೇರಳ ಕಾಂಗ್ರೆಸ್‌ ಮುಖ್ಯಸ್ಥ ಮುಲ್ಲಪಲ್ಲಿ ರಾಮಚಂದ್ರನ್‌ ಕಿಡಿಕಾರಿದ್ದಾರೆ. ರಾಜ್ಯದಾದ್ಯಂತ ಅವರು ಕೈಗೊಂಡಿದ್ದ ’ಜನಮಹಾ ಯಾತ್ರೆ’ಯನ್ನು ನಿಲ್ಲಿಸಿ, ಕಾಸರಗೋಡೆಗೆ ಬಂದಿದ್ದಾರೆ.

ಕಳೆದ ಮೂವತ್ತ ವರ್ಷಗಳಲ್ಲಿ ಕಣ್ಣೂರಿನಲ್ಲಿ ಆರ್‌ಎಸ್‌ಎಸ್‌ ಮತ್ತು ಸಿಪಿಐ(ಎಂ)ನ 300ಕ್ಕೂ ಹೆಚ್ಚು ಕಾರ್ಯಕರ್ತರು ರಾಜಕೀಯ ವೈಷಮ್ಯಕ್ಕೆ ಬಲಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.