ADVERTISEMENT

Siddique Kappan | ಜಾಮೀನು ಸಿಕ್ಕ 1 ತಿಂಗಳ ಬಳಿಕ ಸಿದ್ದೀಖ್‌ ಕಪ್ಪನ್‌ ಬಿಡುಗಡೆ

ಹಾಥರಸ್ ಅತ್ಯಾಚಾರ ಪ್ರಕರಣದ ವರದಿಗೆ ತೆರಳಿ ಬಂಧನಕ್ಕೊಳಗಾಗಿದ್ದ ಕಪ್ಪನ್‌

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 6:46 IST
Last Updated 2 ಫೆಬ್ರುವರಿ 2023, 6:46 IST
   

ಲಖನೌ: ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ ಪ್ರಕರಣದ ವರದಿ ಮಾಡಲು ತೆರಳಿ ಅಲ್ಲಿ ಬಂಧಿಸಲ್ಪಟ್ಟು, ದೇಶದ್ರೋಹ ಕಾನೂನಿನಡಿ ಜೈಲು ಸೇರಿದ್ದ ಕೇರಳದ ಪತ್ರಕರ್ತ ಸಿದ್ದೀಖ್‌ ಕಪ್ಪನ್‌ ಎರಡು ವರ್ಷಗಳ ಬಳಿಕ ಬಿಡುಗಡೆಗೊಂಡಿದ್ದಾರೆ.

ಗುರುವಾರ ಬೆಳಿಗ್ಗೆ ಲಖನೌ ಜೈಲಿನಿಂದ ಅವರು ಬಿಡುಗಡೆಗೊಂಡರು. ಜಾಮೀನು ಸಿಕ್ಕ ಒಂದು ತಿಂಗಳ ಬಳಿಕ ಅವರು ಬಂಧಮುಕ್ತರಾಗಿದ್ದಾರೆ.

ಅವರ ಮೇಲಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಾರ್‌ ಕೌನ್ಸಿಲ್‌ ಚುನಾವಣೆಯಲ್ಲಿ ನಿರತರಾಗಿದ್ದರಿಂದ ಜಾಮೀನು ಪ್ರಕ್ರಿಯೆ ವಿಳಂಬವಾಗಿತ್ತು.

ADVERTISEMENT

ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ, ಉತ್ತರ ಪ್ರದೇಶದ ಹಾಥರಸ್‌ನಲ್ಲಿ 20 ವರ್ಷದ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ವರದಿಗೆ ತೆರಳಿದ್ದ ಸಿದ್ದೀಖ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಅಶಾಂತಿ ಉಂಟು ಮಾಡಲು ಅವರು ಸ್ಥಳಕ್ಕೆ ತೆರಳುತ್ತಿದ್ದಾರೆ ಎನ್ನುವ ಕಾರಣ ನೀಡಿ ಬಂಧನಕ್ಕೊಳಪಡಿಸಿದ್ದರು. 2020ರ ಅಕ್ಟೋಬರ್‌ನಲ್ಲಿ ಈ ಘಟನೆ ನಡೆದಿತ್ತು.

ಬಳಿಕ ಅವರ ವಿರುದ್ಧ ಯುಎಪಿಎ ಕಾಯ್ದೆಯಡಿ ದೂರು ದಾಖಲಿಸಿ ದೇಶದ್ರೋಹದ ಆರೋಪ ಹೊರಿಸಲಾಗಿತ್ತು. ಬಳಿಕ ನಿಷೇಧಿತ ಪೀಪಲ್ಸ್‌ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ಹಣ ಪಡೆದಿದ್ದಾರೆ ಎನ್ನುವ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿತ್ತು.

2022ರ ಸೆಪ್ಟೆಂಬರ್‌ನಲ್ಲಿ ಅವರಿಗೆ ದೇಶದ್ರೋಹ ಪ್ರಕರಣ ಹಾಗೂ ಡಿಸೆಂಬರ್‌ನಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಜಾಮೀನು ದೊರಕಿತ್ತು. ಅದಾಗ್ಯೂ ಪ್ರಕ್ರಿಯೆಯಲ್ಲಿ ಉಂಟಾದ ಲೋಪದಿಂದಾಗಿ ಒಂದು ತಿಂಗಳ ಬಳಿಕ ಬಿಡುಗಡೆಗೊಂಡಿದ್ದಾರೆ.

ಜೈಲಿನಿಂದ ಹೊರಗೆ ಬಂದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ‘28 ತಿಂಗಳ ಬಳಿಕ ನಾನು ಜೈಲಿನಿಂದ ಹೊರಗೆ ಬಂದಿದ್ದೇನೆ. ನನಗೆ ಬೆಂಬಲ ನೀಡಿದ ಮಾಧ್ಯಮಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ನನ್ನ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಈಗ ನನಗೆ ಸಂತೋಷವಾಗುತ್ತಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.