ADVERTISEMENT

ಗಾಯಕ ಸಿಧು ಮೂಸೆವಾಲಾ ಕುರಿತ BBC ಸಾಕ್ಷ್ಯಚಿತ್ರ: ಪ್ರಸಾರ ತಡೆಗೆ ತಂದೆಯ ಅರ್ಜಿ

ಪಿಟಿಐ
Published 11 ಜೂನ್ 2025, 14:28 IST
Last Updated 11 ಜೂನ್ 2025, 14:28 IST
   

ಚಂಡೀಗಢ: ಹತ್ಯೆಗೀಡಾದ ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಕುರಿತ ಸಾಕ್ಷ್ಯ ಚಿತ್ರವನ್ನು ಬಿಬಿಸಿ ವರ್ಲ್ಡ್‌ ಸರ್ವೀಸ್‌ ಸಿದ್ಧಪಡಿಸಿಧು, ಯುಟ್ಯೂಬ್‌ನಲ್ಲಿ ಎರಡು ಭಾಗಗಳಾಗಿ ಪ್ರದರ್ಶಿಸಿದೆ.

2022ರ ಮೇ 29ರಂದು ಸಿಧು ಕಾರಿನಲ್ಲಿದ್ದ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಇದೀಗ ಅವರ ಕುರಿತ ಸಾಕ್ಷ್ಯ ಚಿತ್ರ ಸಿದ್ಧಗೊಂಡಿದ್ದು, ಇದನ್ನು ಬಿಡುಗಡೆ ಮಾಡದಂತೆ ತಡೆ ನೀಡಬೇಕೆಂದು ಸಿಧು ತಂದೆ ಬಲ್ಕೌರ್‌ ಸಿಂಗ್‌ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ-ರಾಜಕಾರಣಿ ಸಿಧು ಮೂಸ್ ವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಸಿಧು ಮೂಸೆವಾಲಾ ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಮೊಟಕುಗೊಳಿಸಿದ ಒಂದು ದಿನದ ನಂತರ ಸಿಧುಗೆ ಗುಂಡು ಹಾರಿಸಲಾಯಿತು. ಆತನೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಆತನ ಸೋದರ ಸಂಬಂಧಿ ಮತ್ತು ಸ್ನೇಹಿತ ಕೂಡ ಹಲ್ಲೆಯಿಂದ ಗಾಯಗೊಂಡಿದ್ದರು. ಘಟನೆ ಸಂಬಂಧ ಕೆನಡಾದಲ್ಲಿ ಗೋಲ್ಡಿ ಬ್ರಾರ್‌ನನ್ನು ಬಂಧಿಸಲಾಗಿತ್ತು.

ADVERTISEMENT

ಸಿಧುದೀಪ್‌ ಸಿಂಗ್‌ ಸಿಧು (ಸಿಧು ಮೂಸೆವಾಲಾ) ಅವರ ಜನ್ಮದಿನ ಸಂದರ್ಭದಲ್ಲೇ ‘ದಿ ಕಿಲ್ಲಿಂಗ್ ಕಾಲ್‌’ ಎಂಬ ಶೀರ್ಷಿಕೆಯಡಿ ಸಾಕ್ಷ್ಯಚಿತ್ರವನ್ನು ಬಿಬಿಸಿ ಬಿಡುಗಡೆ ಮಾಡಿದೆ. ಇದಕ್ಕೆ ತಡೆ ನೀಡುವಂತೆ ಸಿಧು ತಂದೆ ಬಲ್ಕೌರ್ ಸಿಂಗ್ ಅವರು ಮಾನ್ಸಾ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜೂನ್ 12ಕ್ಕೆ ನ್ಯಾಯಾಲಯ ಮುಂದೂಡಿದೆ.

‘ಮಗನ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಅದರ ಮೇಲೆ ಈ ಸಾಕ್ಷ್ಯಚಿತ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಜತೆಗೆ ಇದು ಕುಟುಂಬದ ಖಾಸಗಿತನಕ್ಕೂ ಧಕ್ಕೆಯುಂಟು ಮಾಡಲಿದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಹಾಡಹಗಲೇ ನಡೆದ ಈ ಕೊಲೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೆನಡಾ ಮೂಲದ ಗೋಲ್ಡಿ ಬ್ರಾರ್‌ ಹೊತ್ತುಕೊಂಡಿದ್ದ. ಮೂಸೆವಾಲಾ ಹತ್ಯೆಯು ಸಾಕಷ್ಟು ಸುದ್ದಿಯಾಗಿತ್ತು. 

ಮೂಸೆವಾಲಾ ಅವರ ಬಾಲ್ಯ, ಅವರ ಬೆಳವಣಿಗೆ, ಸಂಗೀತ ಜಗತ್ತಿನಲ್ಲಿ ಅವರು ಸಂಪಾದಿಸಿದ ಹೆಸರು ಹಾಗೂ ಕೊಲೆಯ ಮತ್ತು ಅದಕ್ಕೆ ಕಾರಣಗಳ ಕುರಿತು ಸಾಕ್ಷ್ಯಚಿತ್ರ ಬೆಳಕು ಚೆಲ್ಲಿದೆ. ಇದರಲ್ಲಿ ಮೂಸೆವಾಲಾ ಸ್ನೇಹಿತರು, ಪಂಜಾಬ್ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ಪತ್ರಕರ್ತರ ಸಂದರ್ಶನಗಳೂ ಇವೆ.

ಪ್ರಕರಣ ನಡೆದು ಮೂರು ವರ್ಷಗಳು ಕಳೆದಿವೆ. ಈವರೆಗೂ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಕೊಲೆಗೆ ಕಾರಣವೇನು ಎಂಬುದೂ ಅಸಷ್ಟವಾಗಿದ್ದು, ಪ್ರಮುಖ ಆರೋಪ ಗೋಲ್ಡಿ ಬ್ರಾರ್‌ ನಾಪತ್ತೆಯಾಗಿದ್ದಾನೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹಚರನಾದ ಈತನ ಮೂಲ ಹೆಸರು ಸತೀಂದರ್‌ಜೀತ್ ಸಿಂಗ್. ಪಂಜಾಬ್‌ನ ಮುಕ್ತಾರ್ ಸಾಹಿಬ್‌ನ ನಿವಾಸಿಯಾಗಿದ್ದ ಈತ 2017ರಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ಕೆನಡಾಗೆ ಹೋಗಿ, ನಂತರ ಅಲ್ಲಿಯೇ ನೆಲಸಿ, ಬಿಷ್ಣೋಯಿ ಗ್ಯಾಂಗ್‌ನ ಸಕ್ರಿಯ ಸದಸ್ಯನಾಗಿ ಕೆಲಸ ಮಾಡುತ್ತಿದ್ದಾನೆ. ಬಬ್ಬರ್ ಖಾಲ್ಸಾ ಎನ್ನುವ ಸಂಘಟನೆಯ ಸದಸ್ಯನಾದ ಈತನನ್ನು ಭಾರತ ಸರ್ಕಾರವು ಭಯೋತ್ಪಾದಕ ಎಂದು ಘೋಷಿಸಿದೆ. 

ಈತನ ಮೇಲೆ ಹಲವು ಕೊಲೆ, ಸುಲಿಗೆ ಆರೋಪಗಳೂ ಇವೆ. ಈತನ ಸುಳಿವು ನೀಡಿದವರಿಗೆ ಭಾರತ ಸರ್ಕಾರವು ₹10 ಲಕ್ಷ ಬಹುಮಾನ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.