ADVERTISEMENT

ನವಜೋತ್ ಸಿಂಗ್ ಸಿಧು ತಲೆ ಕತ್ತರಿಸಿದರೆ ₹5 ಲಕ್ಷ: ಬಜರಂಗದಳ

ಪಾಕ್‌ ಸೇನಾ ಮುಖ್ಯಸ್ಥರ ಆಲಿಂಗನಕ್ಕೆ ತೀವ್ರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2018, 18:06 IST
Last Updated 20 ಆಗಸ್ಟ್ 2018, 18:06 IST
   

ಲಖನೌ: ‘ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರ ತಲೆ ಕತ್ತರಿಸಿ ತಂದವರಿಗೆ ₹5 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಬಜರಂಗದಳದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ್‌ ಜಾಟ್‌ ಘೋಷಿಸಿದ್ದಾರೆ.

‘ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್ ಅವರ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಧು ಪಾಕಿಸ್ತಾನಕ್ಕೆ ತೆರಳಿದ್ದು ನಾಚಿಕೆಗೇಡಿತನ ಸಂಗತಿ. ತಕ್ಷಣವೇ ಅವರನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

’ಆಗ್ರಾಗೆ ಸಿಧು ಭೇಟಿ ನೀಡಿದರೆ ಬೂಟುಗಳ ಮಾಲೆಯನ್ನು ಅರ್ಪಿಸಲಾಗುವುದು’ ಎಂದು ಹೇಳಿದ್ದಾರೆ. ಸಂಜಯ್‌ ಜಾಟ್‌ ಅವರ ಈ ಹೇಳಿಕೆ ಒಳಗೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ₹5ಲಕ್ಷ ಚೆಕ್‌ ಪ್ರದರ್ಶಿಸುತ್ತಿರುವ ದೃಶ್ಯವೂ ಇದೆ.

ADVERTISEMENT

ಸ್ಥಳೀಯ ಪೊಲೀಸರು ಈ ವಿಡಿಯೊ ಅನ್ನು ನೋಡಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೊ ದೊರೆತ ಬಳಿಕ ಸತ್ಯಾಸತ್ಯತೆ ಪರಿಶೀಲಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹಲವು ಸಂಘಟನೆಗಳು ಸೋಮವಾರ ಉತ್ತರ ಪ್ರದೇಶದ ವಿವಿಧೆಡೆ ಸಿಧು ಅವರ ಪ್ರತಿಕೃತಿ ದಹಿಸಿದರು.

ಬಿಹಾರದಲ್ಲಿ ದೂರು ದಾಖಲು: ಸಿಧು ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿದೆ. ಮುಜಾಫ್ಫರ್‌ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ಸುಧೀರ್‌ ಕುಮಾರ್ ಓಝಾ ಎಂಬುವರು ದೂರು ದಾಖಲಿಸಿದ್ದು, ಜಿಲ್ಲಾ ಮುಖ್ಯನ್ಯಾಯಾಧೀಶ ಹರಿಪ್ರಸಾದ್ ಅವರು ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 24ಕ್ಕೆ ನಿಗದಿ ಮಾಡಿದ್ದಾರೆ. ಸಿಧು ಅವರ ನಡೆ, ಭಾರತೀಯರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಸುಧೀರ್‌ ಆರೋಪಿಸಿದ್ದಾರೆ.

ಅಲ್ಲಿನ ಸೇನಾ ಮುಖ್ಯಸ್ಥರ ಆದೇಶದಂತೆ, ಗಡಿಯಲ್ಲಿ ಭಾರತೀಯ ಯೋಧರ ಹತ್ಯೆಯಾಗುತ್ತಿದೆ. ಅವರನ್ನು ಆಲಂಗಿಸಿಕೊಳ್ಳುವ ಮೂಲಕ, ಹುತಾತ್ಮರಾದ ಭಾರತೀಯ ಯೋಧರ ಕುಟುಂಬವನ್ನು ಸಿಧು ಅಣಕಿಸಿದ್ದಾರೆ ಎಂದಿದ್ದಾರೆ.

‘ಈ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಿಧು ಬಂಧನಕ್ಕೆ ಆದೇಶಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ನಾಚಿಕೆಗೇಡಿನ ಪರಮಾವಧಿ: ಶಿವಸೇನಾ ಕಟು ಟೀಕೆ
ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸಿದ ಪಂಜಾಬ್‌ ಸರ್ಕಾರದ ಸಚಿವ ನವಜೋತ್‌ ಸಿಂಗ್‌ ಸಿಧು ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಸಿಧು ಅವರ ಈ ನಡೆ ’ನಾಚಿಕೆಗೇಡಿನ ಪರಮಾವಧಿ’ ಎಂದು ಅದು ಟೀಕಿಸಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್‌ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಸಿಧು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಅವರನ್ನು ಆತ್ಮೀಯವಾಗಿ ಆಲಂಗಿಸಿಕೊಂಡಿದ್ದರು.

ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಶಿವಸೇನೆ, ಸಿಧುರನ್ನು ‘ದೇಶದ್ರೋಹಿ’ ಎಂದು ಕರೆದ ಬಿಜೆಪಿಯನ್ನೂ ಟೀಕಿಸಿದೆ. ‘ಯಾರಿಗೇ ಆಗಲಿ ಕೆಲವರು ಸುಲಭವಾಗಿ ‘ದೇಶದ್ರೋಹಿ’ ಪಟ್ಟ ಕಟ್ಟಿಬಿಡುತ್ತಾರೆ. ನೋಟು ರದ್ದು ಕ್ರಮವನ್ನು ವಿರೋಧಿಸಿದವರು, ಮೋದಿಯನ್ನು ಟೀಕಿಸಿದವರೂ ‘ದೇಶದ್ರೋಹಿ’ಗಳಾಗಿ ಬಿಡುತ್ತಾರೆ ಎಂದು ಅದು ಟೀಕಿಸಿದೆ.

ಈ ಮೊದಲು ಪ್ರಧಾನಿ ಮೋದಿ, ಪಾಕಿಸ್ತಾನದ ಆಗಿನ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಆಲಂಗಿಸಿಕೊಂಡು ಶುಭ ಕೋರಿದಾಗ ಅದನ್ನು ಬಿಜೆಪಿಯವರು ‘ಮಹಾನ್‌ ನಡೆ’ ಎಂದು ಕೊಂಡಾಡಿದ್ದರು. ಆದರೆ, ಈಗ ಅದೇ ರೀತಿ ನಡೆದುಕೊಂಡ ಸಿಧು ಅವರನ್ನು ಟೀಕಿಸುತ್ತಿದ್ದಾರೆ ಎಂದು ಶಿವಸೇನೆ ವ್ಯಂಗ್ಯವಾಡಿದೆ.

‘ಸಕಾಲದಲ್ಲಿ ತಕ್ಕ ಉತ್ತರ’

ಸೇನಾಮುಖ್ಯಸ್ಥರನ್ನು ಆತ್ಮೀಯವಾಗಿ ಆಲಂಗಿಸಿಕೊಂಡಿದ್ದಕ್ಕೆ ಕೇಳಿ ಬಂದ ಟೀಕೆಗೆ ಪ್ರತಿಕ್ರಿಯಿಸಿರುವ ಸಿಧು, ‘ಸಮಯ ಬಂದಾಗ ತಕ್ಕ ಉತ್ತರ ನೀಡುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಟೀಕೆಗೆ ಉತ್ತರ ಕೊಡಲು ಸಿದ್ಧವಾಗಿದ್ದೇನೆ. ಎಲ್ಲರಿಗೂ ಉತ್ತರ ಕೊಡುತ್ತೇನೆ. ನಿಸ್ಸಂದೇಹವಾಗಿ ಅದು ಬಹಳ ಕಠಿಣ ಪ್ರತಿಕ್ರಿಯೆಯಾಗಿರುತ್ತದೆ’ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ದೂರು ದಾಖಲು

ಸಿಧು ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿದೆ. ಮುಜಾಫ್ಫರ್ನಗರದ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ಸುಧೀರ್‌ ಕುಮಾರ್ ಓಝಾ ಎಂಬುವರು ದೂರು ದಾಖಲಿಸಿದ್ದು, ಜಿಲ್ಲಾ ಮುಖ್ಯನ್ಯಾಯಾಧೀಶ ಹರಿಪ್ರಸಾದ್ ಅವರು ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 24ಕ್ಕೆ ನಿಗದಿ ಮಾಡಿದ್ದಾರೆ.

ಸಿಧು ಅವರ ನಡೆ, ಭಾರತೀಯರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಸುಧೀರ್‌ ಆರೋಪಿಸಿದ್ದಾರೆ.

‘ಈ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಿಧು ಬಂಧನಕ್ಕೆ ಆದೇಶಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.