ADVERTISEMENT

ಕೇರಳ, ಕರ್ನಾಟಕ ಉಗ್ರರ ನೆಲೆ: ವಿಶ್ವಸಂಸ್ಥೆ ವರದಿ

ಪಿಟಿಐ
Published 25 ಜುಲೈ 2020, 12:56 IST
Last Updated 25 ಜುಲೈ 2020, 12:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಐಎಸ್‌ ಸಂಘಟನೆಗೆ ಸೇರಿದ ಉಗ್ರರು ಗಣನೀಯ ಪ್ರಮಾಣದಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಭಯೋತ್ಪಾದನೆ ಕುರಿತ ವರದಿ ಉಲ್ಲೇಖಿಸಿದೆ.

ಭಾರತ ಉಪಖಂಡದಲ್ಲಿರುವ ಅಲ್‌ಖೈದಾ ಉಗ್ರ ಸಂಘಟನೆಯಲ್ಲಿ ಭಾರತ, ಪಾಕಿಸ್ತಾನ, ಮ್ಯಾನ್ಮಾರ್‌ಗೆ ಸೇರಿದ 150 ರಿಂದ 200 ಮಂದಿ ಉಗ್ರರಿದ್ದು, ಈ ಭಾಗದಲ್ಲಿ ದಾಳಿ ನಡೆಸುವ ಯೋಜನೆ ರೂಪಿಸುತ್ತಿದೆ ಎಂದುವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಕಣ್ಗಾವಲು (ಅನಾಲಿಟಿಕಲ್‌ ಸಪೋರ್ಟ್‌ ಆ್ಯಂಡ್‌ ಸಾಂಕ್ಷನ್ಸ್‌ ಮಾನಿಟರಿಂಗ್‌) ತಂಡದ 26ನೇ ವರದಿ ತಿಳಿಸಿದೆ. ಈ ತಂಡವು ಐಎಸ್‌, ಅಲ್‌ಖೈದಾ ಮತ್ತು ಇತರ ವೈಯಕ್ತಿಕ ಮತ್ತು ಉಗ್ರ ಗುಂಪುಗಳ ಚಟುವಟಿಕೆಯ ಮೇಲೆ ಗಮನವಿಡುತ್ತದೆ.

ಭಾರತ ಉಪಖಂಡದಲ್ಲಿ ಅಲ್‌ಖೈದಾ ಸಂಘಟನೆಯು, ಅಫ್ಗಾನಿಸ್ತಾನದ ನಿಮುಲ್‌, ಹೆಲ್ಮಂಡ್‌ ಮತ್ತು ಕಂದಹಾರ್‌ ಪ್ರಾಂತ್ಯಗಳಲ್ಲಿರುವ ತಾಲಿಬಾಲ್‌ ಸಂಘಟನೆಯ ನಿರ್ದೇಶನದಡಿ ಕಾರ್ಯನಿರ್ವಹಿಸುತ್ತಿದೆ.

ADVERTISEMENT

ಅಸೀಮ್‌ ಉಮರ್‌ ಹತ್ಯೆಯಾದ ನಂತರ ಒಸಾಮಾ ಮಹಮೂದ್‌ ಎಂಬಾತ ಈ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದಾನೆ. ಮಾಜಿ ನಾಯಕನ ಹತ್ಯೆಗೆ ಪ್ರತೀಕಾರ ಕೈಗೊಳ್ಳಲು ಸಂಘಟನೆ ಯೋಜನೆ ರೂಪಿಸುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2019ರ ಮೇ 10ರಂದು ಆರಂಭಗೊಂಡಿರುವ ಐಎಸ್‌ಐಎಲ್‌ನ ಭಾರತೀಯ ಅಂಗಸಂಸ್ಥೆ ‘ಹಿಂದ್‌ ವಿಲಾಯ’ದಲ್ಲಿ 180 ರಿಂದ 200 ಸದಸ್ಯರಿದ್ದಾರೆ. ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಇವರ ಸಂಖ್ಯೆ ಗಣನೀಯವಾಗಿದೆ. ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ಉಗ್ರರು ಹಾಗೂ ಭದ್ರತಾಪಡೆಗಳ ಮಧ್ಯೆ ಸಂಘರ್ಷ ನಡೆದ ನಂತರ ಐಎಸ್‌ ಸಂಸ್ಥೆಯು ಭಾರತದಲ್ಲಿ ಹೊಸ ಪ್ರಾಂತ್ಯವನ್ನು ಆರಂಭಿಸಿರುವುದಾಗಿ ವರದಿಯಾಗಿತ್ತು. ಇದನ್ನು ಸಂಘಟನೆಯ ಅಮಾಕ್‌ ಸುದ್ದಿ ಸಂಸ್ಥೆಯು ಖಚಿತಪಡಿಸಿದ್ದು, ‘ವಿಲಾಯ ಆಫ್‌ ಹಿಂದ್‌ (ಭಾರತೀಯ ಪ್ರಾಂತ್ಯ) ಎಂದು ಹೆಸರಿಡಲಾಗಿದೆ’ ಎಂದು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.