ADVERTISEMENT

ಸಿಂಧೂರ ಸಿಡಿಮದ್ದಾಗಿ...! ಆಪರೇಷನ್ ಸಿಂಧೂರದ ಬಗ್ಗೆ ಪ್ರಧಾನಿ ಮೋದಿ ಮಾತು

ಪಿಟಿಐ
Published 22 ಮೇ 2025, 9:58 IST
Last Updated 22 ಮೇ 2025, 9:58 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಪಿಟಿಐ

ಬಿಕಾನೇರ್(ರಾಜಸ್ಥಾನ): ‘ಸಿಂಧೂರವು ‘ಸಿಡಿಮದ್ದಿನ ಪುಡಿ’ಯಾದರೆ ಏನಾಗುತ್ತದೆ ಎಂದು ಇಡೀ ಜಗತ್ತು ಮತ್ತು ನಮ್ಮ ಶತ್ರುಗಳು ನೋಡಿದ್ದಾರೆ. ಈಗ ಮೋದಿಯ ನರಗಳಲ್ಲಿ ರಕ್ತವಲ್ಲ ಬಿಸಿ ಸಿಂಧೂರ ಹರಿಯುತ್ತಿದೆ. ಭಯೋತ್ಪಾದನೆಯ ಪ್ರತಿಯೊಂದು ದಾಳಿಗೂ ಪಾಕಿಸ್ತಾನವು ಭಾರೀ ಬೆಲೆ ತೆರಬೇಕಾಗುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ADVERTISEMENT

ಪ್ರಧಾನಿ ಮೋದಿ ಅವರು ರಾಜಸ್ಥಾನದಲ್ಲಿ ಗುರುವಾರ ನಡೆದ ರ್‍ಯಾಲಿವೊಂದರಲ್ಲಿ ಮಾತನಾಡಿದರು. ‘ಆಪರೇಷನ್‌ ಸಿಂಧೂರ’ ನಡೆದ ಬಳಿಕ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕ ರ್‍ಯಾಲಿವೊಂದರಲ್ಲಿ ಮಾತನಾಡಿದ್ದಾರೆ.

‘ಮುಗ್ಧ ಜನರನ್ನು ಹತ್ಯೆ ಮಾಡಿ, ಭಾರತದಲ್ಲಿ ಭಯದ ವಾತಾವರಣ ಸೃಷ್ಟಿಸುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಿತ್ತು. ಆದರೆ, ‘ಭಾರತ ಮಾತೆಯ ಸೇವಕ’ನಾಗಿ ಮೋದಿ ಇಲ್ಲಿ ಧೈರ್ಯದಿಂದ ನಿಂತಿದ್ದಾನೆ. ನನ್ನ ಮನಸ್ಸು ಶಾಂತವಾಗಿರಬಹುದು. ಆದರೆ, ನನ್ನ ರಕ್ತ ಕುದಿಯುತ್ತಿದೆ’ ಎಂದರು.

‘ಭಯೋತ್ಪಾದನಾ ದಾಳಿಗೆ ನಾವು ಪ್ರತೀಕಾರ ತೀರಿಸಿಕೊಂಡಿಲ್ಲ. ಇದೊಂದು ‘ಹೊಸ ಸ್ವರೂಪದ ನ್ಯಾಯದಾನ’. ಇದರಲ್ಲಿ ಪಾಕಿಸ್ತಾನದೊಂದಿಗೆ ವ್ಯಾಪಾರ ಅಥವಾ ಮಾತುಕತೆಗಳು ಇರುವುದಿಲ್ಲ. ಹಾಗೇನಾದರೂ ಮಾತುಕತೆ ನಡೆದರೆ ಅದು ಪಾಕ್‌ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ’ ಎಂದರು.

‘ಬೀಕಾನೆರ್‌ನ ನಾಲ್‌ ವಾಯು ನೆಲೆಯನ್ನು ಗುರಿಯಾಗಿಸಿ ಪಾಕಿಸ್ತಾನವು ದಾಳಿ ಮಾಡಿತು. ಆದರೆ, ಯಾವುದೇ ಹಾನಿ ಮಾಡಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ರಹೀಮ್‌ ಯಾರ್‌ ಖಾನ್‌ ವಾಯು ನೆಲೆಯು ಕಾರ್ಯನಿರ್ವಹಿಸಲು ಯಾವಾಗ ಆರಂಭಿಸುತ್ತದೊ ಗೊತ್ತಿಲ್ಲ. ಅದು ಈಗ ತೀವ್ರ ನಿಗಾ ಘಟಕದಲ್ಲಿದೆ. ನಮ್ಮ ದಾಳಿಯಿಂದ ಅದು ನಾಶವಾಗಿದೆ’ ಎಂದರು.

‘ಭಾರತದೊಂದಿಗೆ ನೇರ ಯುದ್ಧ ಮಾಡಿ ಗೆಲ್ಲಲ್ಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ. ಯಾವಾಗೆಲ್ಲಾ ನಮ್ಮೊಂದಿಗೆ ನೇರ ಯುದ್ಧ ಮಾಡಿದ್ದಾರೊ ಆವಾಗೆಲ್ಲ ಅದು ಸೋಲುಂಡಿದೆ. ಈ ಕಾರಣಕ್ಕಾಗಿಯೇ ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸುತ್ತದೆ’ ಎಂದರು.

‘ಆಪರೇಷನ್‌ ಸಿಂಧೂರ’ಕ್ಕಿತ್ತು ಮೂರು ಸೂತ್ರ

‘ಅಣ್ವಸ್ತ್ರ ಬೆದರಿಕೆಗೆ ಭಾರತವು ಹೆದರುವುದಿಲ್ಲ. ನಮ್ಮ ದೇಶದಲ್ಲಿ ಭಯೋತ್ಪಾದನಾ ದಾಳಿ ನಡೆದರೆ ಅದಕ್ಕೆ ತಕ್ಕ ಉತ್ತರ ನೀಡಲಾಗುತ್ತದೆ. ಯಾವ ರೀತಿ ಯುದ್ಧ ಮಾಡಬೇಕು ಯಾವ ಜಾಗ ಎಂದೆಲ್ಲಾ ಸೇನೆ ನಿರ್ಧರಿಸುತ್ತದೆ. ಕರಾರುಗಳೂ ನಮ್ಮದೇ ಆಗಿರುತ್ತವೆ. ಭಯೋತ್ಪಾದಕರನ್ನು ಮತ್ತು ಭಯೋತ್ಪಾದನೆಗೆ ಸರ್ಕಾರದ ಬೆಂಬಲವನ್ನು ನಾವು ಪ್ರತ್ಯೇಕವಾಗಿ ನೋಡುವುದಿಲ್ಲ. ಈ ಎರಡೂ ಒಂದೇ ಆಗಿವೆ. ಇದು ‘ಆಷರೇಷನ್‌ ಸಿಂಧೂರ’ಕ್ಕೆ ಇವೇ ಮೂರು ಸೂತ್ರಗಳಾಗಿದ್ದವು’ ಎಂದು ಪ್ರಧಾನಿ ಮೋದಿ ವಿವರಿಸಿದರು.

  • ಮೂರೂ ಸೇನಾ ಪಡೆಗಳಿಗೆ ನಮ್ಮ ಸರ್ಕಾರ ಸ್ವಾತಂತ್ರ್ಯ ನೀಡಿತ್ತು. ಮೂರು ಪಡೆಗಳು ಒಟ್ಟಿಗೆ ಕೆಲಸ ಮಾಡಿ ಪಾಕಿಸ್ತಾನವನ್ನು ಮಂಡಿಯೂರಿಸಿದರು

  • ಪಾಕಿಸ್ತಾನವು ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿದರೆ ಅದು ಒಂದೊಂದು ರೂಪಾಯಿಗೂ ಭಿಕ್ಷೆ ಬೇಡಬೇಕಾಗುತ್ತದೆ. ಪಾಕಿಸ್ತಾನಕ್ಕೆ ಅದರ ಪಾಲಿನ ನೀರು ಸಿಗುವುದಿಲ್ಲ. ಭಾರತೀಯರ ರಕ್ತದ ಜೊತೆ ಆಟವಾಡಿದರೆ ಪಾಕಿಸ್ತಾನವು ತೀವ್ರ ಬೆಲೆ ತೆರಬೇಕು. ಇದು ಭಾರತದ ನಿರ್ಧಾರ. ಈ ನಿರ್ಧಾರದಿಂದ ನಮ್ಮನ್ನು ಹಿಂದೆ ಸರಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ

  • ಜಗತ್ತಿನ ಎದುರು ಸತ್ಯವನ್ನು ತಿಳಿಸಲು ಸರ್ವ ಪಕ್ಷಗಳ ನಿಯೋಗವನ್ನು ಕಳುಹಿಸಲಾಗಿದೆ. ಪಾಕಿಸ್ತಾನದ ನಿಜ ಮುಖವನ್ನು ಜಗತ್ತಿನಲ್ಲಿ ತೆರೆದಿಡಲಾಗುವುದು ನರೇಂದ್ರ ಮೋದಿ ಪ್ರಧಾನಿ

ಹಳೇ ಭಾಷಣ ನೆನಪಿಸಿಕೊಂಡ ಪ್ರಧಾನಿ

‘ದೇಶ ಮಂಡಿಯೂರಲು ಬಿಡುವುದಿಲ್ಲ ಎಂದು ನಾನು ಶಪಥ ಮಾಡಿದ್ದೇನೆ’ ಎಂದು 2019ರಲ್ಲಿ ಪಾಕಿಸ್ತಾನದ ವಿರುದ್ಧ ಬಾಲಾಕೋಟ್‌ ದಾಳಿ ನಡೆಸಿದಾಗ ತಾವು ರಾಜಸ್ಥಾನದ ಚುರೂ ಪ್ರದೇಶದಲ್ಲಿ ನಡೆದ ರ್‍ಯಾಲಿವೊಂದರಲ್ಲಿ ಮಾಡಿದ ಭಾಷಣವನ್ನು ಪ್ರಧಾನಿ ಮೋದಿ ಅವರು ಇದೇ ವೇಳೆ ನೆನಪಿಸಿಕೊಂಡರು. ‘ರಾಜಸ್ಥಾನದ ನೆಲದಿಂದ ಇಂದು ನಾನು ದೇಶವಾಸಿಗಳಿಗೆ ಹೇಳುವುದೇನೆಂದರೆ ಯಾರು ಸಿಂಧೂರವನ್ನು ಅಳಿಸಿದರೊ ಅವರನ್ನು ನಾಶ ಮಾಡಿದ್ದೇವೆ. ಹಿಂದೂಸ್ಥಾನದ ರಕ್ತ ಚೆಲ್ಲಾಡಿದವರು ಪ್ರತೀ ಹನಿ ರಕ್ತದ ಬೆಲೆಯನ್ನೂ ತೆತ್ತಿದ್ದಾರೆ. ತಮ್ಮ ಶಸ್ತ್ರಗಳ ಬಗ್ಗೆ ಯಾರಿಗೆ ಅಹಂಕಾರವಿತ್ತೊ ಅವರು ಈಗ ಅವಶೇಷಗಳ ಅಡಿಯಲ್ಲಿ ಹೂತು ಹೋಗಿದ್ದಾರೆ’ ಎಂದರು. 2016ರಲ್ಲಿ ನಡೆದ ಸರ್ಜಿಕಲ್‌ ಸ್ಟ್ರೈಕ್‌ ಮತ್ತು ಬಾಲಾಕೋಟ್‌ ದಾಳಿಗಳನ್ನು ಪ್ರಸ್ತಾಪಿಸಿದ ಮೋದಿ ‘ಹಿಂದೆ ಅವರ ಮನೆಗಳಿಗೆ ನುಗ್ಗಿ ದಾಳಿ ನಡೆಸಿದ್ದೆವು. ಈಗ ನೇರ ಅವರ ಹೃದಯದ ಮೇಲೆಯೇ ದಾಳಿ ನಡೆಸಿದ್ದೇವೆ’ ಎಂದರು.

ಸೇನೆಗೆ ಸ್ವಾತಂತ್ರ್ಯ ನೀಡಿದ್ದ ಸರ್ಕಾರ: ಮೋದಿ
  1. ಮೂರೂ ಸೇನಾ ಪಡೆಗಳಿಗೆ ನಮ್ಮ ಸರ್ಕಾರ ಸ್ವಾತಂತ್ರ್ಯ ನೀಡಿತ್ತು. ಮೂರು ಪಡೆಗಳು ಒಟ್ಟಿಗೆ ಕೆಲಸ ಮಾಡಿ ಪಾಕಿಸ್ತಾನವನ್ನು ಮಂಡಿಯೂರಿಸಿವೆ

  2. ಪಾಕಿಸ್ತಾನವು ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿದರೆ, ಅದು ಒಂದೊಂದು ರೂಪಾಯಿಗೂ ಭಿಕ್ಷೆ ಬೇಡಬೇಕಾಗುತ್ತದೆ. ಪಾಕಿಸ್ತಾನಕ್ಕೆ ಅದರ ಪಾಲಿನ ನೀರು ಸಿಗುವುದಿಲ್ಲ. ಭಾರತೀಯರ ರಕ್ತದ ಜೊತೆ ಆಟವಾಡಿದರೆ ಪಾಕಿಸ್ತಾನವು ತೀವ್ರ ಬೆಲೆ ತೆರಬೇಕು. ಇದು ಭಾರತದ ನಿರ್ಧಾರ. ಈ ನಿರ್ಧಾರದಿಂದ ನಮ್ಮನ್ನು ಹಿಂದೆ ಸರಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ.

  3. ಜಗತ್ತಿನ ಎದುರು ಸತ್ಯವನ್ನು ತಿಳಿಸಲು, ಸರ್ವ ಪಕ್ಷಗಳ ನಿಯೋಗವನ್ನು ಕಳುಹಿಸಲಾಗಿದೆ. ಪಾಕಿಸ್ತಾನದ ನಿಜ ಮುಖವನ್ನು ಜಗತ್ತಿನಲ್ಲಿ ತೆರೆದಿಡಲಾಗುವುದು.

– ನರೇಂದ್ರ ಮೋದಿ, ಪ್ರಧಾನಿ

ಟೊಳ್ಳು ಭಾಷಣ ನಿಲ್ಲಿಸಿ: ರಾಹುಲ್‌

ಮೋದಿ ಅವರೇ ಟೊಳ್ಳು ಭಾಷಣ ಮಾಡುವುದನ್ನು ನಿಲ್ಲಿಸಿ. ಇಷ್ಟು ಹೇಳಿ:

  1. ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನದ ಮಾತುಗಳನ್ನು ನೀವು ಯಾಕೆ ನಂಬಿದಿರಿ?

  2. ಟ್ರಂಪ್‌ ಅವರ ಮುಂದೆ ಭಾರತದ ಜನರ ಹಿತಾಸಕ್ತಿಗಳನ್ನು ಯಾಕೆ ಬಲಿ ಕೊಟ್ಟಿರಿ?

  3. ಕ್ಯಾಮೆರಾಗಳ ಮುಂದೆ ಮಾತ್ರವೇ ಯಾಕೆ ನಿಮ್ಮ ರಕ್ತ ಕುದಿಯುತ್ತದೆ? ಭಾರತದ ಘನತೆಯೊಂದಿಗೆ ರಾಜಿ ಮಾಡಿಕೊಂಡು ಬಿಟ್ಟಿರಿ!

– ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ (ಎಕ್ಸ್‌ ಪೋಸ್ಟ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.