ADVERTISEMENT

ಉತ್ತರ ಪ್ರದೇಶ: ತಂದೆ–ತಾಯಿಯಿಂದ ದೂರವಾಗಿದ್ದ ಮಕ್ಕಳನ್ನು ಬೆಸೆದ ಎಸ್‌ಐಆರ್‌!

ಪಿಟಿಐ
Published 1 ಡಿಸೆಂಬರ್ 2025, 15:47 IST
Last Updated 1 ಡಿಸೆಂಬರ್ 2025, 15:47 IST
<div class="paragraphs"><p>ಎಸ್‌ಐಆರ್</p></div>

ಎಸ್‌ಐಆರ್

   

ಬರೇಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಗ್ಗೆ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸುತ್ತಿವೆ. ವಿರೋಧಗಳ ಮಧ್ಯೆಯೇ ಉತ್ತರ ಪ್ರದೇಶದ ಬರೇಲಿಯಲ್ಲಿ ಮನಮಿಡಿಯುವ ಮಾಹಿತಿ ಹೊರಬಿದ್ದಿದೆ. ಎಷ್ಟೋ ವರ್ಷಗಳಿಂದ ತಂದೆ–ತಾಯಿಯಿಂದ ದೂರವಾಗಿದ್ದ ಮಕ್ಕಳನ್ನು ಎಸ್‌ಐಆರ್‌ ಹೆತ್ತವರ ಹತ್ತಿರಕ್ಕೆ ತರುತ್ತಿದೆ.

ಪ್ರೇಮ ವಿವಾಹಗಳ ನಂತರ ಕೆಲವು ಪೋಷಕರು ತಮ್ಮ ಮಕ್ಕಳಿಗೆ ಶಾಶ್ವತವಾಗಿ ಮನೆ ಬಾಗಿಲು ಮುಚ್ಚಿದ್ದರು. ಮತದಾರರ ಪಟ್ಟಿಗೆ 2003ರ ಹಿಂದಿನ ಮಾಹಿತಿ ಅಗತ್ಯವಿರುವ ಕಾರಣಕ್ಕೆ ಹಲವು ಮಕ್ಕಳು ಪೋಷಕರನ್ನು ಸಂಪರ್ಕಿಸುತ್ತಿದ್ದಾರೆ. ಈ ವೇಳೆ ನಡೆದಿರುವ ಭಾವನಾತ್ಮಕ ಸಂಭಾಷಣೆಗಳು ಮನಕಲಕುವಂತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಜೋಗಿ ನಾವಡಾದಲ್ಲಿ 40 ವರ್ಷದ ಸ್ನೇಹಲತಾ 15 ವರ್ಷದ ಹಿಂದೆ ಓಂಕಾರ ಚೌಧರಿ ಅವರನ್ನು ವಿವಾಹವಾಗಿದ್ದರಿಂದ ಪೋಷಕರು ಎಫ್‌ಐಆರ್‌ ದಾಖಲಿಸಿದ್ದರು. ಚೌಧರಿ ಪರವಾಗಿ ನಿಂತ ಮಗಳನ್ನು ದೂರ ತಳ್ಳಿದ್ದರಂತೆ. ಅಧಿಕಾರಿಗಳು ಎಸ್‌ಐಆರ್ ಪ್ರಕ್ರಿಯೆ ವೇಳೆ 2003ರ ಮತದಾರರ ಪಟ್ಟಿಯ ಮಾಹಿತಿ ಕೇಳಿದಾಗ ಆಕೆ ತನ್ನ ಪೋಷಕರಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಮತದಾರರ ಪಟ್ಟಿ ಪರಿಶೀಲನೆ ವೇಳೆ ವಿವರ ಅಸ್ಪಷ್ಟವಾಗಿದ್ದಲ್ಲಿ ಪೋಷಕರ 2003ರ ಹಿಂದಿನ ಮತದಾರರ ಚೀಟಿಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿಶೇಷವಾಗಿ ಪ್ರೇಮ ವಿವಾಹದ ನಂತರ ಕುಟುಂಬಗಳಿಂದ ದೂರವಾದ ಪುರುಷ ಅಥವಾ ಮಹಿಳೆಯರು ತಮ್ಮ ಪೋಷಕರನ್ನು ಸಂಪರ್ಕಿತ್ತಿದ್ದಾರೆ’ ಎಂದು ಜಿಲ್ಲಾ ಉಪ ಚುನಾವಣಾಧಿಕಾರಿ (ಎಡಿಸಿ) ತಿಳಿಸಿದ್ದಾರೆ. 

‘ಬುಲಂದ್‌ಶಹರ್‌ನ ಸುಲೇಖ ಫರೀದ್‌ಪುರದ ನವಾಬ್‌ ಹಸನ್‌ ಮದುವೆ ಮಾಡಿಕೊಂಡಿದ್ದರು. ಸದ್ಯ ರಿಹಾನ ಎಂದು ಹೆಸರು ಬದಲಿಸಿಕೊಂಡಿರುವ ಆಕೆ ದಶಕದಿಂದಲೂ ಪೋಷಕರ ಜೊತೆ ಮಾತನಾಡಿರಲಿಲ್ಲ. ಅಧಿಕಾರಿಗಳು ಅವರ ತಂದೆಯ ಮತದಾರರ ಚೀಟಿಯ ವಿವರ ಕೇಳಿದ್ದರು. ಈ ವೇಳೆ ಆಕೆ ತನ್ನ ತಾಯಿಗೆ ಕರೆ ಮಾಡಿದ್ದರು. ತಾಯಿ ಮತ್ತು ಮಗಳ ನಡುವೆ ಭಾವನಾತ್ಮಕ ಸಂಭಾಷಣೆ ನಡೆಯಿತು‘ ಎಂದು ಬಿಎಲ್‌ಒ ಒಬ್ಬರು ಹೇಳಿದ್ದಾರೆ.

‘ತಿರಿಯಾ ನಿಜಾವತ್‌ ಖಾನ್‌ ನಗರದಲ್ಲಿ ಇಂತಹ ಅನೇಕ ಪ್ರಕರಣಗಳು ಕಂಡುಬಂದವು. ದೆಹಲಿ, ಜಮ್ಮು–ಕಾಶ್ಮೀರ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ ಹೀಗೆ ಹಲವು ರಾಜ್ಯಗಳಿಂದ ಪ್ರೇಮ ವಿವಾಹವಾಗಿ ಬಂದವರು, ಅಂತರ್‌ಧರ್ಮೀಯ ವಿವಾಹ ಆದವರು ಎಸ್‌ಐಆರ್ ವೇಳೆ ತಮ್ಮ ಪೋಷಕರನ್ನು ಸಂಪರ್ಕಿಸಿದ್ದಾರೆ. ಪ್ರೇಮ ವಿವಾಹವಾದವರ ವಿಳಾಸ ಮತ್ತು ಹಳೆಯ ಮತದಾರರ ಚೀಟಿಯ ಮಾಹಿತಿ ಸಂಗ್ರಹ ಸವಾಲಾಗಿದೆ ‘ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.

ಖೇಡಾ ಗ್ರಾಮದ ರಾಮವೀರ್‌ ಸಿಂಗ್‌ ಪುತ್ರ ಅವದೇಶ್‌ ಅದೇ ಗ್ರಾಮದ ಯುವತಿ ಜೊತೆ 10 ವರ್ಷದ ಹಿಂದೆ ಮನೆಬಿಟ್ಟು ಹೋಗಿದ್ದ. ಇದೀಗ ‘ಗುಜರಾತ್‌ನ ಭಾವ್‌ ನಗರದಿಂದ ಮಗ–ಸೊಸೆ ಮತದಾರರ ಚೀಟಿಯ ಮಾಹಿತಿಗಾಗಿ ಕರೆ ಮಾಡಿದ್ದರು’ ಎಂದು ಸಿಂಗ್‌ ತಿಳಿಸಿದ್ದಾರೆ.

ಆಂವಲಾ ಲೋಕಸಭಾ ಕ್ಷೇತ್ರದ ಬಿಲ್ಪುರ್‌ನ ಕೇಶವ್‌ ಅವರ ಪುತ್ರಿ 9 ವರ್ಷದ ಹಿಂದೆ ಸಂಬಂಧಿಕರ ಯುವಕನ ಜೊತೆ ಹೋಗಿದ್ದರಂತೆ. ‘ಇದೀಗ ನನ್ನ ಪತ್ನಿಗೆ ಕರೆ ಮಾಡಿದ್ದಳು. ಅವಳ ಧ್ವನಿ ಕೇಳಿ ನನ್ನ ಪತ್ನಿ ಗದ್ಗದಿತಳಾದಳು’ ಎಂದು ಕೇಶವ್‌ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.