
ಚೆನ್ನೈ: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕುರಿತಾದ ಸಮಸ್ಯೆಗಳನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪಿತೂರಿ ರೂಪಿಸಿದೆ’ ಎಂದು ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮಖ್ಯಸ್ಥ, ನಟ ವಿಜಯ್ ಆರೋಪಿಸಿದ್ದಾರೆ.
‘ಎಸ್‌ಐಆರ್ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಣಯವನ್ನು ಸರ್ವ ಪಕ್ಷಗಳ ಸಭೆಯಲ್ಲಿ ಅಂಗೀಕರಿಸಲಾಗಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿಸ್ ಭಾನುವಾರ ತಿಳಿಸಿದ್ದರು. ಬೆನ್ನಲ್ಲೇ ವಿಜಯ್ ಈ ಪ್ರತಿಕ್ರಿಯೆ ನೀಡಿದ್ದಾರೆ.
‘ಡಿಎಂಕೆ ಪಕ್ಷವು ಎಸ್‌ಐಆರ್ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಪ್ರಯತ್ನಿಸುತ್ತಿದೆ. ಬಿಜೆಪಿ ಜತೆಗೆ ಡಿಎಂಕೆ ಪರೋಕ್ಷ ನಂಟನ್ನೂ ಹೊಂದಿದೆ’ ಎಂದು ವಿಜಯ್ ಹೇಳಿದ್ದಾರೆ.
ಅಲ್ಲದೇ, ‘ಕೇರಳ ಸರ್ಕಾರವು ವಿಧಾನಸಭೆಯಲ್ಲಿ ಎಸ್‌ಐಆರ್ ವಿರುದ್ಧ ನಿರ್ಣಯ ಅಂಗೀಕರಿಸಿದಂತೆಯೇ ಡಿಎಂಕೆ ನೇತೃತ್ವದ ಸರ್ಕಾರವೂ ಮಾಡಬಹುದಿತ್ತು. ಆದರೆ, ಸರ್ವ ಪಕ್ಷ ಸಭೆಯ ಹೆಸರಿನಲ್ಲಿ ಮಿತ್ರ ಪಕ್ಷಗಳನ್ನು ವಂಚಿಸಿದಂತೆಯೇ ಬೇರೆ ಅವರನ್ನೂ ವಂಚಿಸಬಹುದು ಎಂದು ಡಿಎಂಕೆ ಭಾವಿಸಿದೆ. ಡಿಎಂಕೆಯ ನಾಟಕವನ್ನು ನಂಬಲು ಜನರು ತಯಾರಿಲ್ಲ’ ಎಂದೂ ಕಿಡಿ ಕಾರಿದ್ದಾರೆ.
ಇದೇ ವೇಳೆ, ‘ಎಸ್‌ಐಆರ್ ಪ್ರಕ್ರಿಯೆಯು ತೀವ್ರ ಗೊಂದಲಗಳಿಂದ ಕೂಡಿದೆ’ ಎಂದು ವಿಜಯ್ ಹೇಳಿದ್ದಾರೆ. ಬಿಹಾರದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಇನ್ನೂ ಬಾಕಿ ಇದೆ. ಅಲ್ಪಸಂಖ್ಯಾತರನ್ನೂ ಸೇರಿದಂತೆ ಕೆಲವು ನಿರ್ದಿಷ್ಟ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂಬ ಆರೋಪವಿದೆ. ಈ ಎಲ್ಲದಕ್ಕೂ ಸೂಕ್ತ ಸ್ಪಷ್ಟನೆ ಸಿಗುವವರೆಗೂ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದೂ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.