
ನವದೆಹಲಿ: ಪೌರತ್ವಕ್ಕೆ ಸಂಬಂಧಿಸಿದ ಸಂಶಯಾಸ್ಪದ ಘಟ್ಟವನ್ನು ಚುನಾವಣಾ ಆಯೋಗ ನಿರ್ಧರಿಸಲು ಸಾಧ್ಯವಿಲ್ಲವೇ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕೇಳಿದೆ.
ವ್ಯಕ್ತಿಯ ಪೌರತ್ವ ವಿಚಾರದಲ್ಲಿ ಸಂಶಯ ವ್ಯಕ್ತವಾದಾಗ ಆಯೋಗದಿಂದ ವಿಚಾರಣೆ ನಡೆಸಲು ಆಗುವುದಿಲ್ಲವೇ ಮತ್ತು ಈ ಕುರಿತು ತನಿಖೆ ನಡೆಸುವ ಸಾಂವಿಧಾನಿಕ ಅಧಿಕಾರ ಆಯೋಗಕ್ಕೆ ಇಲ್ಲವೇ ಎಂದು ಅದು ಪ್ರಶ್ನಿಸಿದೆ.
ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ನೇತೃತ್ವದ ಪೀಠ ಈ ಕುರಿತು ಕೇಳಿದೆ.
ಪೌರತ್ವ ಕುರಿತು ಸಮಸ್ಯೆಗಳನ್ನು ಚುನಾವಣಾ ಆಯೋಗದಿಂದ ನಿರ್ಧರಿಸಲು ಸಾಧ್ಯವಿಲ್ಲ ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದರು. ಪೌರತ್ವವು ವ್ಯಕ್ತಿಯು ಭಾರತೀಯ ಪ್ರಜೆಯಾಗಿರಬೇಕು, 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾಗಿರಬೇಕು ಮತ್ತು ಕ್ಷೇತ್ರವೊಂದರಲ್ಲಿ ಸಾಮಾನ್ಯ ನಿವಾಸಿ ಆಗಿರಬೇಕು ಎಂಬುದನ್ನು ಪರಿಗಣಿಸಬೇಕಾಗುತ್ತದೆ ಎಂದು ವಾದ ಮಾಡಿದರು.
ಪೌರತ್ವ ಸಮಸ್ಯೆಯನ್ನು ಕೇಂದ್ರ ಸರ್ಕಾರ ನೇಮಿಸಿದ ವಿದೇಶಿಯ ನ್ಯಾಯಮಂಡಳಿ ಮಾತ್ರ ನಿರ್ಧರಿಸಬಹುದು ಎಂದು ಅರ್ಜಿದಾರರು ಮಾಡಿದ ವಾದವನ್ನು ಪೀಠ ಗಮನಿಸಿತು.
‘ಅಂದರೆ ಆಯೋಗವು ಒಬ್ಬ ವ್ಯಕ್ತಿಯನ್ನು ವಿದೇಶಿ ಪ್ರಜೆ ಅಥವಾ ದೇಶದ ನಾಗರಿಕನಲ್ಲ ಎಂದು ಘೋಷಿಸುವ ಅಧಿಕಾರ ಹೊಂದಿಲ್ಲ ಎಂಬುದು ನಿಮ್ಮ ವಾದ. ಆದರೆ, ಅದು ಪೌರತ್ವವನ್ನು ಅನುಮಾನಿಸಬಹುದು ಮತ್ತು ಸಮಸ್ಯೆಯನ್ನು ಸಕ್ಷಮ ಅಧಿಕಾರಿಗಳಿಗೆ ಉಲ್ಲೇಖಿಸಬಹುದಲ್ಲ’ ಎಂದು ಪೀಠ ಹೇಳಿದೆ. ಉಳಿದ ಅರ್ಜಿಗಳ ವಿಚಾರಣೆಯನ್ನು ಪೀಠ ಇದೇ 11ರಂದು ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.