ADVERTISEMENT

ಎಸ್‌ಐಆರ್ | ಮತದಾರರ ಹೊರಗಿಡುವ ಪ್ರಕ್ರಿಯೆ: ಮಮತಾ ಬ್ಯಾನರ್ಜಿ ಆರೋಪ

ಪಿಟಿಐ
Published 10 ಜನವರಿ 2026, 16:26 IST
Last Updated 10 ಜನವರಿ 2026, 16:26 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

ಕೋಲ್ಕತ್ತ: ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ (ಎಸ್‌ಐಆರ್‌) ಕಾರ್ಯವು ದಾಖಲೆಗಳನ್ನು ಸರಿಪಡಿಸುವ ಬದಲಿಗೆ, ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಚಟುವಟಿಕೆಯಾಗಿ ಪರಿವರ್ತಿತವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.  

ಈ ಕುರಿತು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಶನಿವಾರ ಪತ್ರ ಬರೆದಿರುವ ಅವರು, ‘ಆಯೋಗವು ರಾಜಕೀಯ ಪಕ್ಷಪಾತ ಮತ್ತು ದರ್ಪದಿಂದ ವರ್ತಿಸುತ್ತಿದೆ’ ಎಂದು ದೂರಿದ್ದಾರೆ. 

ADVERTISEMENT

ಇಡೀ ಪ್ರಕ್ರಿಯೆಯು ಹೆಚ್ಚಾಗಿ ಯಾಂತ್ರಿಕವಾಗಿದ್ದು, ತಾಂತ್ರಿಕ ದತ್ತಾಂಶಗಳಿಗೆ ಒತ್ತು ನೀಡಲಾಗಿದೆ. ಮನಸ್ಸು, ಸೂಕ್ಷ್ಮ ಮತ್ತು ಮಾನವ ಸ್ಪರ್ಶದ ಕೊರತೆಯಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ. 

‘ಒಟ್ಟಾರೆ ಎಸ್‌ಐಆರ್‌ ಕಸರತ್ತಿನ ಉದ್ದೇಶ ತಿದ್ದುಪಡಿ ಅಥವಾ ಸೇರ್ಪಡೆಯಲ್ಲ. ಬದಲಿಗೆ ಕೇವಲ ಹೆಸರುಗಳನ್ನು ಅಳಿಸುವ ಮತ್ತು ಹೊರಗಿಡುವ ಪ್ರಕ್ರಿಯೆ’ ಎಂದು ಮಮತಾ ಟೀಕಿಸಿದ್ದಾರೆ. 

ಕಾಗುಣಿತ ದೋಷಗಳು, ವಯಸ್ಸಿನ ವ್ಯತ್ಯಾಸಗಳಿಗಾಗಿ ಜನಸಾಮಾನ್ಯರನ್ನು ವಿಚಾರಣೆಗೆ ಬರುವಂತೆ ಮಾಡುವುದು ಒಂದು ರೀತಿಯ ಕಿರುಕುಳ. ಅಲ್ಲದೆ ಇದರಿಂದ ಅವರ ದಿನದ ಕೂಲಿಯೂ ನಷ್ಟವಾಗುತ್ತದೆ ಎಂದು ಅವರು ಕಿಡಿಕಾರಿದ್ದಾರೆ. 

ವಿವಾಹದ ನಂತರ ಮಹಿಳೆಯ ಉಪನಾಮಗಳು ಬದಲಾಗುತ್ತವೆ. ಆದರೆ ಅದನ್ನೇ ಎತ್ತಿ ತೋರಿಸಿ, ಅವರಿಗೆ ಗುರುತು ಸಾಬೀತುಪಡಿಸಲು ಸೂಚಿಸಲಾಗುತ್ತಿದೆ. ಇದು ಗಂಭೀರ ಅವಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.