
ಎಸ್ಐಆರ್ ವಿರೋಧಿಸಿ ವಿರೋಧ ಪಕ್ಷಗಳ ನಾಯಕರು ಮಂಗಳವಾರ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತಿತರರು ಪಾಲ್ಗೊಂಡಿದ್ದರು
–ಪಿಟಿಐ ಚಿತ್ರ
ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಮತ್ತು ಈ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಸಂಸತ್ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಎಸ್‌ಐಆರ್ ವಿರುದ್ಧದ ಪೋಸ್ಟರ್‌ಗಳು ಮತ್ತು ಫಲಕಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಎಸ್‌ಐಆರ್ ನಿಲ್ಲಿಸಿ–ಮತಗಳ್ಳತನ ನಿಲ್ಲಿಸಿ’ ಎಂದು ಬರೆದ ದೊಡ್ಡ ಬ್ಯಾನರ್ ಹಿಡಿದು ಪ್ರತಿಭಟಿಸಿದರು. ಡಿಎಂಕೆಯ ಕನಿಮೋಳಿ, ಟಿ.ಆರ್.ಬಾಲು ಮತ್ತು ಸಿಪಿಎಂನ ಜಾನ್ ಬ್ರಿಟ್ಟಾಸ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
‘ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕಿಗಿಂತ ದೊಡ್ಡ ವಿಷಯ ಯಾವುದಿರಲು ಸಾಧ್ಯ?’ ಎಂದು ರಾಹುಲ್ ಗಾಂಧಿ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಪ್ರಧಾನಿ ಮೋದಿ ಅವರು, ‘ಸಂಸತ್ತು ಈ ದೇಶದ ಜನರಿಗೆ ಸಂಬಂಧಿಸಿದ್ದು’ ಎಂದು ಹೇಳುತ್ತಾರೆ. ಆದರೆ, ಜನರ ಕಲ್ಯಾಣಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಚರ್ಚೆಯಿಂದ ಅವರು ವಿಮುಖರಾಗುತ್ತಾರೆ’ ಎಂದು ದೂರಿದ್ದಾರೆ.
‘ಮತದಾನ ಪ್ರತಿಯೊಬ್ಬ ನಾಗರಿಕರ ಹಕ್ಕು. ದೇಶದ ಬಡ ಮತ್ತು ದುರ್ಬಲ ಸಮುದಾಯದ ಜನರ ಹಕ್ಕನ್ನು ಕಸಿಯಲು ಎಸ್‌ಐಆರ್ ಅನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಈ ಮೂಲಕ ಚುನಾವಣೆಗಳನ್ನು ಏಕಪಕ್ಷೀಯವನ್ನಾಗಿ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತು ಚುನಾವಣಾ ಆಯೋಗವು ಎಸ್ಐಆರ್ ಮೂಲಕ ಒಟ್ಟಾಗಿ ‘ಮತಕಳ್ಳತನ’ದಲ್ಲಿ ತೊಡಗಿವೆ’ ಎಂದು ಆರೋಪಿಸಿದ್ದಾರೆ.
‘ಲಕ್ಷಾಂತರ ದಲಿತರು, ಹಿಂದುಳಿದವರು, ಬುಡಕಟ್ಟು ಜನರ ಮತದಾನದ ಹಕ್ಕನ್ನು ಕಸಿಯುವ ಸಂಘಟಿತ ಯತ್ನ ನಡೆಯುತ್ತಿದೆ. ಆಯೋಗವು ವಿರೋಧ ಪಕ್ಷಗಳ ಎಲ್ಲ ಪ್ರಶ್ನೆಗಳನ್ನೂ ನಿರ್ಲಕ್ಷಿಸಿದೆ. ಸರ್ಕಾರವು ಬಹಿರಂಗವಾಗಿ ಆಯೋಗವನ್ನು ಸಮರ್ಥಿಸುತ್ತಿದೆ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶ ಮಾಡಿ ಸರ್ವಾಧಿಕಾರ ಸ್ಥಾಪನೆಗಾಗಿ ಈ ಪಿತೂರಿ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಅವರ ಈ ಆಕಾಂಕ್ಷೆಯನ್ನು ಸಾಕಾರವಾಗಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಎಸ್‌ಐಆರ್ ಕುರಿತ ಚರ್ಚೆಗೆ ಸರ್ಕಾರವು ಸಿದ್ಧವಿದೆ. ಆದರೆ ವಿಪಕ್ಷಗಳು ಚರ್ಚೆಗೆ ಕಾಲಮಿತಿ ನಿಗದಿ ಮಾಡುವಂತಿಲ್ಲಕಿರಣ್ ರಿಜಿಜು ಸಂಸದೀಯ ವ್ಯವಹಾರಗಳ ಸಚಿವ
ವಿಪಕ್ಷ ಸದಸ್ಯರೊಂದಿಗೆ ಸ್ಪೀಕರ್ ಸಭೆ
ಎಸ್‌ಐಆರ್ ಕುರಿತ ಚರ್ಚೆ ವಿಚಾರವು ಕಲಾಪಕ್ಕೆ ಅಡ್ಡಿಯಾಗಿರುವುದರಿಂದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ವಿರೋಧ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದರು. ಇದಕ್ಕೂ ಮುನ್ನ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸತ್ ಸದಸ್ಯರನ್ನು ಭೇಟಿಯಾಗಿದ್ದರು. ಆದರೆ ಎಸ್‌ಐಆರ್ ಕುರಿತ ಚರ್ಚೆಗೆ ಕಾಲಮಿತಿ ನಿಗದಿ ಮಾಡಲು ನಿರಾಕರಿಸಿದ್ದರು.
ಕಾಲಮಿತಿ ನಿಗದಿಗೆ ಆಗ್ರಹ: ಸಭಾತ್ಯಾಗ
ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಕಾಲಮಿತಿಯಲ್ಲಿ ಚರ್ಚೆ ನಡೆಸಬೇಕೆಂಬ ವಿಚಾರವಾಗಿ ಸರ್ಕಾರ ಮತ್ತು ವಿರೋಧ ಪಕ್ಷಗಳ ಮಧ್ಯೆ ರಾಜ್ಯಸಭೆಯಲ್ಲಿ ಮಂಗಳವಾರವೂ ಜಟಾಪಟಿ ಮುಂದುವರಿಯಿತು. ಆದ್ಯತೆಯ ಮೇರೆಗೆ ಎಸ್‌ಐಆರ್ ಕುರಿತು ಚರ್ಚೆ ನಡೆಸಬೇಕು ಎಂದು ವಿಪಕ್ಷಗಳ ನಾಯಕರು ಆಗ್ರಹಿಸಿದರು. ಆದರೆ ‘ವಂದೇ ಮಾತರಂ’ ಕುರಿತು ಮೊದಲು ಚರ್ಚೆ ನಡೆಸಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಒತ್ತಿ ಹೇಳಿದರು. ಎಸ್‌ಐಆರ್ ಕುರಿತ ಚರ್ಚೆಗೆ ಸರ್ಕಾರ ನಿರಾಕರಿಸುತ್ತಿದ್ದಂತೆಯೇ ವಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿ ಸಭಾತ್ಯಾಗ ಮಾಡಿದರು. ಮಧ್ಯಾಹ್ನ 2 ಗಂಟೆಯ ಬಳಿಕ ಮತ್ತೆ ಕಲಾಪ ಆರಂಭವಾದಾಗಲೂ ಇದೇ ವಿಚಾರವಾಗಿ ವಾಗ್ವಾದ ನಡೆಯಿತು. ಮತ್ತೆ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.