ಜಮ್ಮುವಿನ ರೆಹರಿ ಕಾಲೋನಿಯ ಚಿತ್ರಣ
ರಾಯಿಟರ್ಸ್
ಜಮ್ಮು: ‘ಸೈರನ್ ಶಬ್ಧ ಕೇಳುತ್ತಿದ್ದಂತೆ ಎಚ್ಚರಗೊಂಡು ಸುರಕ್ಷಿತ ಸ್ಥಳಕ್ಕೆ ಧಾವಿಸಿದೆವು... ಸ್ವಲ್ಪ ಕ್ಷಣದಲ್ಲೇ ಸ್ಟೋಟವೊಂದು ನಮ್ಮ ಮನೆಯನ್ನು ಅಲುಗಾಡಿಸಿತು’ ಎಂದು ಜಮ್ಮು ನಗರದ ರೆಹರಿ ಕಾಲೋನಿಯ ನಿವಾಸಿ ಗುಲ್ಶನ್ ದತ್ತ ಅವರ ಪತ್ನಿ ಹೇಳಿದ್ದಾರೆ.
‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಚರಣೆ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರಗೊಂಡಿದ್ದು, ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆ ದಾಳಿ ಆರಂಭಿಸಿದೆ.
ಶನಿವಾರ ಮುಂಜಾನೆ ಸುಮಾರು 5 ಗಂಟೆಯ ವೇಳೆ ಜಮ್ಮು ಮತ್ತು ಕಾಶ್ಮೀರದ ಆರು ಸ್ಥಳಗಳಲ್ಲಿ ಪಾಕಿಸ್ತಾನವು ಶೆಲ್ ದಾಳಿ ನಡೆದಿರುವುದು ವರದಿಯಾಗಿದೆ. ದಾಳಿಯಲ್ಲಿ ಸರ್ಕಾರಿ ಹಿರಿಯ ಅಧಿಕಾರಿ ಸೇರಿದಂತೆ ಐವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಜಮ್ಮುವಿನ ಜನನಿಬಿಡ ಪ್ರದೇಶ ರೆಹರಿ ಕಾಲೋನಿಯೂ ಸೇರಿದೆ. ಗುಲ್ಶನ್ ದತ್ತ ಅವರ ಮನೆಗೆ ನುಗ್ಗಿದ ಬಾಂಬ್‌ವೊಂದು ಕಟ್ಟಡವನ್ನು ನೆಲಸಮಗೊಳಿಸಿದ್ದು, ಹತ್ತಿರದ ವಾಹನಗಳು ಸಂಪೂರ್ಣ ಹಾನಿಗೊಂಡಿವೆ.
‘ಸೈರನ್ ಶಬ್ದ ಕೇಳುತ್ತಿದ್ದಂತೆ ಬಾಲ್ಕನಿಯಿಂದ ಇಳಿದು ನೆಲ ಮಹಡಿಗೆ ಧಾವಿಸಿದೆವು. ಅಷ್ಟರಲ್ಲೇ ದೊಡ್ಡ ಸ್ಟೋಟವೊಂದು ನಮ್ಮ ಮನೆಯನ್ನು ಅಲುಗಾಡಿಸಿತು’ ಎಂದು ದತ್ತ ಅವರ ಪತ್ನಿ ಘಟನೆಯ ಭಯಾನಕತೆಯನ್ನು ವಿವರಿಸಿದ್ದಾರೆ.
ಕೊದಲೆಳೆಯ ಅಂತರದಲ್ಲಿ ನಮ್ಮ ಕುಟುಂಬವು ಪಾರಾಗಿದ್ದು, ದಾಳಿಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
‘ಸೈರನ್ ಶಬ್ಧ ನಮ್ಮ ಜೀವಗಳನ್ನು ಉಳಿಸಿತು. ಅಲ್ಲಿಂದ ಸ್ಥಳಾಂತರವಾಗಿರದಿದ್ದರೆ ಇಷ್ಟು ಹೊತ್ತಿಗೆ ನಾವು ಹೆಣವಾಗುತ್ತಿದ್ದೆವು. ಮಾತಾ ರಾಣಿ ನಮ್ಮನ್ನು ರಕ್ಷಿಸಿದರು’ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
‘ಅವರು(ಪಾಕಿಸ್ತಾನ) ಈಗ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಾರೆ. ನಮ್ಮ ಸೈನ್ಯದ ಎದುರು ಹೋರಾಡಲು ಸಾಧ್ಯವಾಗದಿದ್ದಾಗ ಅಮಾಯಕರ ಮೇಲೆ ದಾಳಿ ಮಾಡಲು ಹೊರಟಿದ್ದಾರೆ’ ಎಂದು ಹಜುರಿಬಾಗ್‌ನ ನಿವಾಸಿ ಶಕುಂತಲಾ ದೇವಿ ಕಳವಳ ವ್ಯಕ್ತಪಡಿಸಿದ್ದಾರೆ.
ಶೆಲ್ ದಾಳಿಗೆ ರೆಹರಿ ಕಾಲೋನಿಯಲ್ಲಿನ ಹಲವಾರು ಮನೆಗಳು ಹಾನಿಗೊಳಗಾಗಿದ್ದು, ಚೂರುಚೂರಾದ ಕಾಂಕ್ರೀಟ್‌ಗಳು, ಒಡೆದ ಗೋಡೆ, ಕಿಟಕಿಗಳು ಯುದ್ಧದ ಭೀತಿಯನ್ನು ಹೆಚ್ಚಿಸಿವೆ. ಡ್ರೋನ್ ಹಾರಾಟ ಮತ್ತು ಸೈರನ್ ಶಬ್ಧಗಳಿಂದ ನೆರೆಹೊರೆಯ ಜನರು ನಿದ್ದೆಯಿಲ್ಲದ ರಾತ್ರಿ ಕಳೆಯುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.