ADVERTISEMENT

ಸೋಫಿಯಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ವಿಜಯ್ ಶಾ ವಿರುದ್ಧ ತನಿಖೆ ಆರಂಭಿಸಿದ SIT

ಪಿಟಿಐ
Published 24 ಮೇ 2025, 13:08 IST
Last Updated 24 ಮೇ 2025, 13:08 IST
ವಿಜಯ್ ಶಾ –ಪಿಟಿಐ ಚಿತ್ರ
ವಿಜಯ್ ಶಾ –ಪಿಟಿಐ ಚಿತ್ರ   

ಭೋಪಾಲ್/ಇಂದೋರ್ : ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಆಡಿರುವ ವಿವಾದಾತ್ಮಕ ಮಾತುಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸೂಚನೆಯ ಅನುಸಾರ ರಚನೆ ಆಗಿರುವ ವಿಶೇಷ ತಂಡವು (ಎಸ್‌ಐಟಿ) ತನ್ನ ಕೆಲಸ ಆರಂಭಿಸಿದೆ.

ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಗುರಿಯಾಗಿಸಿಕೊಂಡು ವಿಜಯ್ ಶಾ ಅವರು ಆಕ್ಷೇಪಾರ್ಹ ಮಾತುಗಳನ್ನು ಆಡಿದ ಸ್ಥಳಕ್ಕೆ ತೆರಳಿ, ಅಲ್ಲಿನ ಜನರ ಜೊತೆ ಮಾತುಕತೆ ನಡೆಸುವ ಕೆಲಸವನ್ನು ಮೂವರು ಸದಸ್ಯರ ಎಸ್‌ಐಟಿ ಶುರು ಮಾಡಿದೆ ಎಂದು ಮೂಲಗಳು ಹೇಳಿವೆ.

ಮಧ್ಯಪ್ರದೇಶದ ಸಾಗರ ವಲಯದ ಐಜಿಪಿ ಪ್ರಮೋದ್ ವರ್ಮಾ ಅವರು ಎಸ್‌ಐಟಿ ಮುಖ್ಯಸ್ಥರು. ‘ನಾವು ತನಿಖೆಯನ್ನು ಗುರುವಾರ ಆರಂಭಿಸಿದ್ದೇವೆ’ ಎಂದು ಎಸ್‌ಐಟಿಯ ಸದಸ್ಯರೊಬ್ಬರು ಹೇಳಿದ್ದಾರೆ. ತನಿಖೆಯನ್ನು ಎಸ್‌ಐಟಿ ಮೂಲಕ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ತಾಕೀತು ಮಾಡಿತ್ತು.

ADVERTISEMENT

ಮಧ್ಯಪ್ರದೇಶ ಹೈಕೋರ್ಟ್‌ನ ಸೂಚನೆ ಆಧರಿಸಿ ಪೊಲೀಸರು ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್‌ ಅನ್ನು ಎಸ್‌ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.

ಸಚಿವ ವಿಜಯ್ ಶಾ ಅವರನ್ನು ಯಾವಾಗ ವಿಚಾರಣೆಗೆ ಗುರಿಪಡಿಸಲಾಗುತ್ತದೆ ಎಂಬ ಪ್ರಶ್ನೆಗೆ ಹೆಚ್ಚಿನ ವಿವರ ಒದಗಿಸಲು ಎಸ್‌ಐಟಿ ಸದಸ್ಯರು ನಿರಾಕರಿಸಿದ್ದಾರೆ. ಮೇ 28ರೊಳಗೆ ಪ್ರಥಮ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಎಸ್‌ಐಟಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ವಿಜಯ್ ಶಾ ಆಡಿರುವ ಮಾತುಗಳು ದೇಶವು ನಾಚಿಕೆಪಟ್ಟುಕೊಳ್ಳುವಂತೆ ಮಾಡಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.