ADVERTISEMENT

ಶಾಸಕ ಅಖಿಲ್ ವಿರುದ್ಧ ಎಸ್‌ಐಟಿ ದೂರು

ಅಸ್ಸಾಂ: ಗಾಯಕ ಜುಬಿನ್‌ ಗರ್ಗ್ ಸಾವಿನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 14:40 IST
Last Updated 19 ಡಿಸೆಂಬರ್ 2025, 14:40 IST
ಅಖಿಲ್ ಗೊಗೊಯಿ
ಅಖಿಲ್ ಗೊಗೊಯಿ   

ಗುವಾಹಟಿ: ಗಾಯಕ ಜುಬಿನ್‌ ಗರ್ಗ್ ಸಾವಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ), ಪ್ರಕರಣದ ದೋಷಾರೋಪಕ್ಕೆ ಸಂಬಂಧಿಸಿದ ‘ಪರಿಶೀಲಿಸದ’ ದಾಖಲೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಪಕ್ಷೇತರ ಶಾಸಕ ಅಖಿಲ್ ಗೊಗೊಯ್ ವಿರುದ್ಧ ಅಸ್ಸಾಂ ಪೊಲೀಸ್‌ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಿದೆ.

‘ದಾಖಲೆಗಳನ್ನು ಹಂಚಿಕೊಂಡಿದ್ದು ಕಾನೂನುಬಾಹಿರ. ಜನರನ್ನು ದಾರಿ ತಪ್ಪಿಸುವ ಜತೆಗೆ ಇದು ಗೊಂದಲ ಸೃಷ್ಟಿಸಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಗಾಯಕನ ಸಾವಿನ ಪ್ರಕರಣದ ಏಳು ಆರೋಪಿಗಳ ವಿರುದ್ಧದ ದೋಷಾರೋಪದ ಭಾಗವೆಂದು ಹೇಳಿಕೊಂಡು ಕೆಲವು ದಾಖಲೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪ ಶಿವಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಿಲ್ ಗೊಗೊಯ್ ಮೇಲಿದೆ.

ADVERTISEMENT

ವಿಶೇಷ ಡಿಜಿಪಿ ಮುನ್ನಾ ಪ್ರಸಾದ್‌ ಗುಪ್ತಾ ನೇತೃತ್ವದ ಒಂಬತ್ತು ಸದಸ್ಯರ ಎಸ್‌ಐಟಿ ತಂಡವು ಡಿ. 12ರಂದು ಮೆಟ್ರೊ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಮುಂದೆ ದೋಷಾರೋಪ ಸಲ್ಲಿಸಿತ್ತು.

ದೋಷಾರೋಪದ ಪ್ರಮಾಣೀಕೃತ ಪ್ರತಿಗಳನ್ನು ಅರ್ಜಿ ಸಲ್ಲಿಸಿದವರಿಗೆ ನ್ಯಾಯಾಲಯವು ಇನ್ನೂ ನೀಡಿಲ್ಲ ಎಂದು ವಕೀಲರೊಬ್ಬರು ತಿಳಿಸಿದ್ದು, ಇದನ್ನು ಆರೋಪಿಗಳು ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಮಾತ್ರ ಹಂಚಿಕೊಳ್ಳಲಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.