ADVERTISEMENT

‘ಕುದುರೆ ವ್ಯಾಪಾರ’ದ ಮೇಲೆ ಜಿಎಸ್‌ಟಿ...! ಏನದು ನಿರ್ಮಲಾ ಮಾತು?

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 12:33 IST
Last Updated 30 ಜೂನ್ 2022, 12:33 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ಕಳೆದ ಬುಧವಾರ ಜಿಎಸ್‌ಟಿ ಮಂಡಳಿ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಕುದುರೆ ವ್ಯಾಪಾರ’ದ ಮೇಲೆ ಜಿಎಸ್‌ಟಿ ವಿಧಿಸುವ ವಿಚಾರವನ್ನು ಪ್ರಸ್ತಾಪಿಸಿ ಪೇಚಿಗೀಡಾಗಿದ್ದಾರೆ.

ಕ್ಯಾಸಿನೊ, ಕುದುರೆ ರೇಸ್ ಮತ್ತು ಆನ್‌ಲೈನ್‌ ಗೇಮಿಂಗ್ ಸೇವೆಗಳಿಗೆ ಶೇಕಡ 28ರಷ್ಟು ಜಿಎಸ್‌ಟಿ ವಿಧಿಸುವ ಕುರಿತು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪರಿಶೀಲಿಸುವ ಸಾಧ್ಯತೆ ಇದೆ ಎಂದು ಸಭೆಗೂ ಮುನ್ನ ಸುದ್ದಿಯಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡುವ ವೇಳೆ ನಿರ್ಮಲಾ ಸೀತಾರಾಮನ್‌ ಅವರು ಕುದುರೆ ರೇಸ್‌ (ಹಾರ್ಸ್‌ ರೇಸ್‌) ಎನ್ನುವ ಬದಲಿಗೆ ಕುದುರೆ ವ್ಯಾಪಾರ (ಹಾರ್ಸ್‌ ಟ್ರೇಡಿಂಗ್‌) ಎಂದು ಹೇಳಿದ್ದಾರೆ.

ADVERTISEMENT

ನಿರ್ಮಲಾ ಅವರ ಈ ಹೇಳಿಕೆಯ ವಿಡಿಯೊ ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್‌ ಆಗಿದೆ.

ಈ ವಿಡಿಯೊಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ‘ಹೌದು ನಿರ್ಮಲಾ ಅವರೇ, ಕುದುರೆ ವ್ಯಾಪಾರದ ಮೇಲೆ ಜಿಎಸ್‌ಟಿ ಜಾರಿಯಾಗಬೇಕು’ ಎಂದು ಕುಹಕವಾಡಿದ್ದಾರೆ.

ಕುದುರೆ ವ್ಯಾಪಾರವೆಂಬುದು ಹಣಕಾಸು ಸಚಿವರ ತಲೆಯಲ್ಲಿ ಏಕೆ ಇತ್ತು ಎಂದು ಪತ್ರಕರ್ತೆ ಗೀತಾ ಎಂಬುವವರು ಪ್ರಶ್ನೆ ಮಾಡಿದ್ದಾರೆ.

'ಬಿಜೆಪಿ ಆದಾಯದ ಮೂಲವನ್ನು ಹುಡುಕುತ್ತಿದೆಯೇ? ಸಾಧ್ಯವಿರುವ ಎಲ್ಲಕಡೆಗಳಿಂದಲೂ ದೇಶವನ್ನು ಹಾಳುಮಾಡಿರುವ ‘ನೋ ಆನಿಯನ್‌–ಗಾರ್ಲಿಕ್‌ (ಈರುಳ್ಳಿ, ಬೆಳ್ಳುಳ್ಳಿ) ಸಚಿವೆ ನಿರ್ಮಲಾ ಸೀತಾರಾಮನ್ "ಕುದುರೆ ವ್ಯಾಪಾರ"ಕ್ಕೆ ಜಿಎಸ್‌ಟಿ ವಿಧಿಸಲು ಮುಂದಾಗಿದ್ದಾರೆ ಎಂದು ಟಿಎಂಸಿಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟೀಕಿಸಲಾಗಿದೆ.

ಕುದುರೆ ರೇಸ್‌ ಮೇಲಿನ ಜಿಎಸ್‌ಟಿ ಹೆಚ್ಚಿಸುವ ಪ್ರಸ್ತಾವವನ್ನು ಮುಂದೂಡಲಾಗಿದೆ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.