ADVERTISEMENT

ಕೊಲಿಜಿಯಂ ಕಡೆಗಣನೆ– ಪ್ರಜಾಪ್ರಭುತ್ವಕ್ಕೆ ಮಾರಕ: ನರಿಮನ್‌

ಕೇಂದ್ರ ಸಚಿವ ಕಿರಣ್‌ ರಿಜಿಜು ವಿರುದ್ಧ ನಿವೃತ್ತ ನ್ಯಾಯಮೂರ್ತಿ ಆರ್‌.ಎಫ್‌.ನರಿಮನ್‌ ವಾಗ್ದಾಳಿ

ಪಿಟಿಐ
Published 28 ಜನವರಿ 2023, 18:51 IST
Last Updated 28 ಜನವರಿ 2023, 18:51 IST
ಆರ್‌.ಎಫ್‌.ನರಿಮನ್‌
ಆರ್‌.ಎಫ್‌.ನರಿಮನ್‌   

ಮುಂಬೈ: ನ್ಯಾಯಮೂರ್ತಿ ಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ವ್ಯವಸ್ಥೆ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌.ಎಫ್‌.ನರಿಮನ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಕೊಲಿಜಿಯಂ ಶಿಫಾರಸು ಮಾಡಿದ್ದ ನ್ಯಾಯಮೂರ್ತಿಗಳನ್ನು ಸರ್ಕಾರ ನೇಮಿಸದೇ ಇರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಪರಿಣಮಿಸುತ್ತದೆ’ ಎಂದು ಅವರು ಮುಂಬೈ ವಿಶ್ವವಿದ್ಯಾಲಯದಲ್ಲಿ ನಡೆದ ಮುಖ್ಯ ನ್ಯಾಯಮೂರ್ತಿ ಎಂ.ಸಿ.ಚಾಗ್ಲಾ ಸ್ಮಾರಕ ಉಪನ್ಯಾಸದಲ್ಲಿ ಹೇಳಿದರು.

ಸ್ವತಂತ್ರ ನ್ಯಾಯಾಂಗದ ಕೊನೆಯ ಭದ್ರಕೋಟೆ ಪತನವಾದರೆ, ದೇಶವು ‘ಹೊಸ ಕರಾಳ ಯುಗದ ಪ್ರಪಾತಕ್ಕೆ’ ಬೀಳುತ್ತದೆ ಎಂದು ಅವರು ಎಚ್ಚರಿಸಿದರು.

ADVERTISEMENT

ಸ್ವತಂತ್ರ, ನಿರ್ಭೀತ ನ್ಯಾಯಮೂರ್ತಿಗಳನ್ನು ನೇಮಿಸದಿದ್ದರೆ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಏನಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು. ‘ಈ ಸಂಬಂಧ ಐವರು ವಿಶೇಷ ನ್ಯಾಯಮೂರ್ತಿಗಳ ಪೀಠವನ್ನು ರಚಿಸಬೇಕು. ಕೊಲಿಜಿಯಂ ಸರ್ಕಾರಕ್ಕೆ ಹೆಸರುಗಳನ್ನು ಕಳುಹಿಸಿದ 30 ದಿನಗಳ ಅವಧಿಯೊಳಗೆ ಸರ್ಕಾರ ಕ್ರಮ ತೆಗೆದು ಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರ ಹೇಳುವುದು ಏನೂ ಇಲ್ಲವೆಂದು ಭಾವಿಸಬೇಕಾಗುತ್ತದೆ ಎಂದು ಪೀಠ ತೀರ್ಪು ನೀಡಬೇಕು’ ಎಂದು ಸಲಹೆ ನೀಡಿದರು.

‘‌ಕೊಲಿಜಿಯಂ ಶಿಫಾರಸನ್ನು ಕಡೆಗಣಿಸುವುದು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ. ನಿರ್ದಿಷ್ಟ ಕೊಲಿಜಿಯಂಗಾಗಿ ಕಾಯುವುದು ಮತ್ತು ಮುಂದಿನ ಕೊಲಿಜಿಯಂ ತನ್ನ ಮನಸ್ಸನ್ನು ಬದಲಿಸುತ್ತದೆ ಎಂದು ನಿರೀಕ್ಷಿಸುವುದೂ ಸರಿಯಲ್ಲ. ನ್ಯಾಯಮೂರ್ತಿಗಳ ನೇಮಕಾತಿಯು ನಿಗದಿತ ಅವಧಿ ಯೊಳಗೆ ನಡೆಯಬೇಕು’ ಎಂದರು.

ನರಿಮನ್‌ ಅವರು 2021ರ ಆಗಸ್ಟ್‌ವರೆಗೆ ಸುಪ್ರೀಂ ಕೋರ್ಟ್‌ನ ಕೊಲಿಜಿಯಂನ ಭಾಗವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.