ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ
ಪಿಟಿಐ ಚಿತ್ರ
ನವದೆಹಲಿ: ಪೂರ್ವ ಲಡಾಖ್ ಭಾಗದ ಗಡಿ ನಿಯಂತ್ರಣಾ ರೇಖೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದರೂ ಸ್ಥಿರವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸೋಮವಾರ ಹೇಳಿದ್ದಾರೆ.
ಸೇನಾ ದಿನಕ್ಕೂ ಮುನ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಚೀನಾ ಗಡಿಯಲ್ಲಿ ಇನ್ನೂ ಬಿಕ್ಕಟ್ಟಿನ ಸ್ಥಿತಿಯಿದೆ. ಎರಡೂ ಮಿಲಿಟರಿಗಳ ನಡುವೆ ವಿಶ್ವಾಸ ಮರುಸ್ಥಾಪನೆಗೆ ಇನ್ನಷ್ಟು ಪ್ರಯತ್ನ ಬೇಕಿದೆ. ಸದ್ಯ ಗಡಿಯಲ್ಲಿ ನಿರ್ಲಿಪ್ತ ವಾತಾವರಣವಿದೆ ಎಂದರು.
ಜನವರಿ 15 ರಂದು ಪ್ರತಿ ವರ್ಷ ಸೇನಾ ದಿನ ಆಚರಣೆ ಮಾಡಲಾಗುತ್ತದೆ.
ಪೂರ್ವ ಲಡಾಖ್ ಗಡಿಯಲ್ಲಿನ ಡೆಪ್ಸಾಂಗ್ ಮತ್ತು ಡೆಮ್‌ಚೊಕ್ ಪ್ರದೇಶದಿಂದ ಉಭಯ ದೇಶಗಳು ಸೈನಿಕರನ್ನು ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆ ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದು, ಅಲ್ಲಿ ಸೈನಿಕರ ಗಸ್ತು ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.
‘ಗಡಿ ಭಾಗದಲ್ಲಿ ಎದುರಾಗುವ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಜ್ಜಾಗಿದ್ದೇವೆ. ಗಡಿಯಲ್ಲಿ ಮೂಲಸೌಕರ್ಯದ ಅಭಿವೃದ್ದಿಗೆ ಗಮನಹರಿಸುತ್ತಿದ್ದೇವೆ’ ಎಂದು ಅವರು ಎಲ್‌ಎಸಿಯ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿನ ಒಟ್ಟಾರೆ ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಭಾರತ–ಪಾಕಿಸ್ತಾನ ನಡುವಣ ಕದನ ವಿರಾಮ ಒಪ್ಪಂದವು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಜಾರಿಯಲ್ಲಿದೆ ಎಂದು ಹೇಳಿದರು.
ಗಡಿಯಲ್ಲಿ ಒಳನುಸುಳುವಿಕೆ ಯತ್ನಗಳು ಮುಂದುವರಿದಿದ್ದು, ಪಾಕಿಸ್ತಾನವು ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ಮುಂದುವರಿಸಿದೆ. ಕಳೆದ ವರ್ಷ ಸೇನೆಯ ಗುಂಡಿಗೆ ಬಲಿಯಾದ ಭಯೋತ್ಪಾದಕರಲ್ಲಿ ಶೇ 60ರಷ್ಟು ಮಂದಿ ಪಾಕ್ ಮೂಲದವರು ಎಂದು ತಿಳಿಸಿದರು.
ಭದ್ರತಾ ಪಡೆಗಳು ಮತ್ತು ಸರ್ಕಾರ ತೆಗೆದುಕೊಂಡ ಕ್ರಮಗಳಿಂದ ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ, ಹಿಂಸಾಚಾರ ಪುನರಾವರ್ತನೆಯಾಗುತ್ತಿದ್ದು, ಸಶಸ್ತ್ರ ಪಡೆಗಳು ಶಾಂತಿ ಸ್ಥಾಪಿಸಲು ಪ್ರಯತ್ನ ಮುಂದುವರಿಸಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.