ADVERTISEMENT

ಕಾಶ್ಮೀರ ಸಹಜ ಸ್ಥಿತಿಗೆ: ಜಿ.ಸಿ.ಮುರ್ಮು

ಪಿಟಿಐ
Published 15 ಜನವರಿ 2020, 19:30 IST
Last Updated 15 ಜನವರಿ 2020, 19:30 IST
ಜಿ.ಸಿ.ಮುರ್ಮು
ಜಿ.ಸಿ.ಮುರ್ಮು   

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಜನರು ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಲೆಫ್ಟಿನೆಂಟ್‌ ಗವರ್ನರ್‌ ಜಿ.ಸಿ.ಮುರ್ಮು ಬುಧವಾರ ಹೇಳಿದ್ದಾರೆ.

ನವೀಕರಿಸಿದ ಮೌಲಾನಾ ಆಜಾದ್‌ ಕ್ರೀಡಾಂಗಣದ ಉದ್ಘಾಟನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಎಲ್ಲಾ ಸಂವಹನ ಸೇವೆಗಳನ್ನು ಮರುಸ್ಥಾಪಿಸಲಾಗುವುದು’ ಎಂದಿದ್ದಾರೆ.

ಇಂಟರ್‌ನೆಟ್‌ ಸೇವೆ ಭಾಗಶಃ ಆರಂಭಗೊಂಡಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಇದು ಆರಂಭ, ಆಡಳಿತವು ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಸಂವಹನ ಸೇವೆಗಳು ಹೇಗೆ ಬಳಕೆಯಾಗುತ್ತವೆ ಎಂಬುದನ್ನು ನೋಡಿಕೊಂಡು, ಅವುಗಳನ್ನು ಮರುಸ್ಥಾಪಿಸಲಿದ್ದೇವೆ’ ಎಂದೂ ಹೇಳಿದ್ದಾರೆ.

ಉಗ್ರರ ಜೊತೆ ಬಂಧನಕ್ಕೊಳಗಾಗಿರುವ ಪೊಲೀಸ್‌ ಅಧಿಕಾರಿ ದೇವಿಂದರ್‌ ಸಿಂಗ್‌, ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದಾರೆಂಬ ವರದಿಗೆ ಪ್ರತಿಕ್ರಿಯಿಸಿದ ಮುರ್ಮು ಅವರು ‘ಇದು ತನಿಖೆಗೆ ಬಿಟ್ಟ ವಿಚಾರ. ಆತ ಭಾಗಿಯಾಗಿದ್ದರೆ ಅದು ಬಹಿರಂಗಗೊಳ್ಳಲಿದೆ. ಈ ಕುರಿತು ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದಿದ್ದಾರೆ.

ದೇಶಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ ಆತಿಥ್ಯ ವಹಿಸುವ ಸಲುವಾಗಿ ₹40 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವನ್ನು ನವೀಕರಿಸಲಾಗಿದೆ.

ಉಗ್ರರಿಂದ ದುರ್ಬಳಕೆ ಸಾಧ್ಯತೆ:

ಇಂಟರ್‌ನೆಟ್‌ ಸೇವೆ ದೇಶ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗಬಹುದು ಮತ್ತು ಉಗ್ರರು ದುರ್ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಕಾಶ್ಮೀರದಲ್ಲಿ ಸಾರ್ವಜನಿಕರಿಗೆ ಮತ್ತು ಮಾಧ್ಯಮದವರಿಗೆ ಈ ಸೇವೆಯನ್ನು ಮರುಸ್ಥಾಪಿಸಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಲೀನ್ ಕಬ್ರಾ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಈಚೆಗೆ ಹೊರಡಿಸಿದ್ದ ನಿರ್ದೇಶನಗಳನ್ನು ಅನುಸರಿಸಿ ಜಮ್ಮು ಮತ್ತು ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಪೋಸ್ಟ್‌ಪೇಯ್ಡ್‌ 2ಜಿ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಮರುಸ್ಥಾಪಿಸಲು ಅವರು ಮಂಗಳವಾರ ಆದೇಶಿಸಿದ್ದರು.

ಜಮ್ಮು ಮತ್ತು ಕಾಶ್ಮೀರ ವಿಭಾಗಗಳಲ್ಲಿ ಅಗತ್ಯ ಸೇವೆಗಳನ್ನು ಒದಗಿಸುವ ಆಸ್ಪತ್ರೆ, ಬ್ಯಾಂಕ್‌ ಮತ್ತು ಹೋಟೆಲ್‌ಗಳಿಗೆ ಮಾತ್ರ ಬ್ರಾಡ್‌ಬ್ಯಾಂಡ್‌ ಸೌಲಭ್ಯ ಪುನರಾರಂಭಿಸಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.