ADVERTISEMENT

ರಾಜೀವ್‌ ಗಾಂಧಿ ಹತ್ಯೆ ಪ್ರಕರಣ: ಕಾರಾಗೃಹದಿಂದ ಹಂತಕರ ಬಿಡುಗಡೆ

ಪಿಟಿಐ
Published 12 ನವೆಂಬರ್ 2022, 16:36 IST
Last Updated 12 ನವೆಂಬರ್ 2022, 16:36 IST
ತಮಿಳುನಾಡಿನ ವೆಲ್ಲೂರು ಜೈಲಿನಿಂದ ಶನಿವಾರ ಬಿಡುಗಡೆಯಾದ ನಳಿನಿ ಮತ್ತು ಮುರುಗನ್‌ –ಪಿಟಿಐ ಚಿತ್ರ
ತಮಿಳುನಾಡಿನ ವೆಲ್ಲೂರು ಜೈಲಿನಿಂದ ಶನಿವಾರ ಬಿಡುಗಡೆಯಾದ ನಳಿನಿ ಮತ್ತು ಮುರುಗನ್‌ –ಪಿಟಿಐ ಚಿತ್ರ   

ಚೆನ್ನೈ: ರಾಜೀವ್‌ ಗಾಂಧಿ ಹಂತಕರಾದ ನಳಿನಿ ಶ್ರೀಹರನ್‌, ಆಕೆಯ ಪತಿ ಮತ್ತು ಇತರ ನಾಲ್ವರು ಅಪರಾಧಿಗಳನ್ನು ತಮಿಳುನಾಡಿನ ಎರಡು ಕಾರಾಗೃಹಗಳಿಂದ ಶನಿವಾರ ಸಂಜೆ ಬಿಡುಗಡೆ ಮಾಡಲಾಯಿತು.

ಅತಿ ಹೆಚ್ಚು ಅವಧಿಗೆ ಕಾರಾಗೃಹದಲ್ಲಿ ಇದ್ದ ಭಾರತದ ಮೊದಲ ಮಹಿಳೆ ನಳಿನಿ, ವೆಲ್ಲೂರಿನ ಮಹಿಳಾ ವಿಶೇಷ ಕಾರಾಗೃಹದಿಂದ ಬಿಡುಗಡೆಯಾದರು. ಬಳಿಕ ವೆಲ್ಲೂರಿನ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ತನ್ನ ಪತಿ ವಿ. ಶ್ರೀಹರನ್‌ ಅಲಿಯಾಸ್‌ ಮುರುಗನ್‌ ಅವರನ್ನು ಕಂಡು ಭಾವುಕರಾದರು.

ಬಿಡುಗಡೆ ಬಳಿಕ ನಳಿನಿ ಮತ್ತು ರವಿಚಂದ್ರನ್‌ ಭಾರತೀಯ ಪ್ರಜೆಗಳು. ಹೀಗಾಗಿ ಅವರು ತಮ್ಮ ಊರುಗಳಿಗೆ ತೆರಳಿದರು. ಆದರೆ, ಭಾರತಕ್ಕೆ ಅಕ್ರಮವಾಗಿ ನುಸುಳಿದ್ದ, ಶ್ರೀಲಂಕಾ ಪ್ರಜೆಗಳಾದ ಮುರುಗನ್‌, ಸಂತನ್‌ ಹಾಗೂ ಚೆನ್ನೈಗೆ ಸಮೀಪದ ಪುಝಲ್‌ ಕಾರಾಗೃಹದಿಂದ ಬಿಡುಗಡೆಯಾದ ರಾಬರ್ಟ್‌ ಪಯಾಸ್‌ ಮತ್ತು ಜಯಕುಮಾರ್‌ ಅವರನ್ನು ಪೊಲೀಸ್‌ ವಾಹನದಲ್ಲಿ ತಿರುಚಿರಾಪಳ್ಳಿಯಲ್ಲಿರುವ ವಿಶೇಷ ನಿರಾಶ್ರಿತರ ಶಿಬಿರಕ್ಕೆ ಕರೆದೊಯ್ಯಲಾಯಿತು.

ADVERTISEMENT

‘ಈ ನಾಲ್ವರನ್ನು ಮರಳಿ ಶ್ರೀಲಂಕಾಗೆ ಅಥವಾ ಅವರು ಇಚ್ಛಿಸುವ ದೇಶಕ್ಕೆ ಕಳುಹಿಸುವ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವ ವರೆಗೂ ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗುವುದು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಈ ನಾಲ್ವರನ್ನು ಚೆನ್ನೈ ಬಳಿಯ ಪ್ರದೇಶವೊಂದಕ್ಕೆ ಕಳುಹಿಸುವ ಸಾಧ್ಯತೆಯೂ ಇದೆ’ ಎಂದೂ ತಿಳಿಸಿವೆ.

ಬಿಜೆಪಿ ‘ಮೌನ’: ಕಾಂಗ್ರೆಸ್‌ ಖಂಡನೆ (ನವದೆಹಲಿ ವರದಿ): ರಾಜೀವ್‌ ಗಾಂಧಿ ಹಂತಕರನ್ನು ಅವಧಿಪೂರ್ವ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಆದೇಶ ನೀಡಿರುವ ಕುರಿತು ಬಿಜೆಪಿ ‘ಮೌನ’ ವಹಿಸಿರುವುದನ್ನು ಕಾಂಗ್ರೆಸ್‌ ಶನಿವಾರ ಖಂಡಿಸಿದೆ. ಬಿಜೆಪಿಯು ಮೌನ ವಹಿಸಿರುವುದು ‘ಭಯೋತ್ಪಾದನಾ ಕೃತ್ಯದೊಂದಿಗೆ ರಾಜಿ ಮಾಡಿಕೊಂಡಂತಾಗಿದೆ’ ಎಂದೂ ಕಾಂಗ್ರೆಸ್‌ ದೂರಿದೆ.

‘ಭಯೋತ್ಪಾದಕರ ಕುರಿತು ಎಂದಿಗೂ ಕರುಣೆ ಇರಬಾರದು. ರಾಜೀವ್‌ ಗಾಂಧಿ ಹಂತಕರ ಬಿಡುಗಡೆಯನ್ನು ಬೆಂಬಲಿಸುತ್ತಿರುವವರು ಪರೋಕ್ಷವಾಗಿ ಹಂತಕರನ್ನು ಬೆಂಬಲಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆಯು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ ಬೆನ್ನಲ್ಲೇ ವೇಣುಗೋಪಾಲ್‌ ಅವರು ಈ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.