
ಮೀರತ್‌ನ ಆಸ್ಪತ್ರೆಯೊಂದರ ಹೊರಗೆ ಆಂಬುಲೆನ್ಸ್‌ಗಳ ಸುತ್ತ ನೆರೆದಿರುವ ಜನರು
(ಪಿಟಿಐ ಚಿತ್ರ)
ಮೀರತ್ (ಉತ್ತರ ಪ್ರದೇಶ): ಮೀರಠ್‌ನ ಲಿಸಾಡಿ ಗೇಟ್ ಪ್ರದೇಶದ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ, ನಾಲ್ಕು ತಿಂಗಳ ಅವಳಿ ನವಜಾತ ಶಿಶುಗಳು, 4ರಿಂದ 12 ವರ್ಷದೊಳಗಿನ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಸದಸ್ಯರು ಮೃತಪಟ್ಟಿದ್ದಾರೆ.
ಸೋಮವಾರ ರಾತ್ರಿ ಇಕ್ಬಾಲ್ ಅಹ್ಮದ್ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಮನೆಯ ಹೆಚ್ಚಿನ ಪುರುಷರು ರಂಜಾನ್‌ನ ನಮಾಜ್‌ಗಾಗಿ ಹೊರಗೆ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೈಲರಿಂಗ್ ಮತ್ತು ಆನ್‌ಲೈನ್ ಉಡುಪು ವ್ಯವಹಾರದಲ್ಲಿ ತೊಡಗಿದ್ದ ಕುಟುಂಬದ ಮೂರು ಅಂತಸ್ತಿನ ಮನೆಯ ನೆಲ ಮಹಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಟ್ಟೆಗಳನ್ನು ಸಂಗ್ರಹಿಸಲಾಗಿತ್ತು. ಇದರಿಂದಾಗಿ ಬೆಂಕಿ ವೇಗವಾಗಿ ಹರಡಿತು ಎಂದು ಪೊಲೀಸರು ತಿಳಿಸಿದ್ದಾರೆ.
‘ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿದು ಮಸೀದಿಯಿಂದ ವಾಪಸು ಬಂದಾಗ ಮನೆಯ ಹೊರಗೆ ಜನರು ಜಮಾಯಿಸಿದ್ದರು. ಅವಘಡದಲ್ಲಿ ನನ್ನ ಮಗಳು ಮತ್ತು ಮಗ, ನನ್ನ ಕಿರಿಯ ಸಹೋದರನ ಅವಳಿ ಹೆಣ್ಣುಮಕ್ಕಳು ಮತ್ತು ಮಗ ಮೃತಪಟ್ಟಿದ್ದಾರೆ. ನನ್ನ ತಾಯಿಗೆ ಗಾಯಗಳಾಗಿವೆ’ ಎಂದು ಮೃತರ ಕುಟುಂಬದ ಸದಸ್ಯ ಮೊಹಮ್ಮದ್ ಫಾರೂಕ್ ಹೇಳಿದ್ದಾರೆ.
ಮೃತರನ್ನು ರುಖ್ಸರ್ (25), ಮಹ್ಬಿಶ್ (12), ಹಮ್ಮದ್ (4), ಅಕ್ದಾಸ್ (4) ಮತ್ತು ನಾಲ್ಕು ತಿಂಗಳ ಅವಳಿಗಳಾದ ನಬೀಅ ಮತ್ತು ಇನಾಯತ್ ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಅಮೀರ್ ಬಾನೋ (55) ಎಂಬ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಪರಿಹಾರ ಕ್ರಮಗಳನ್ನು ತ್ವರಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.