ಸಿಎಂ ಯೋಗಿ ಆದಿತ್ಯನಾಥ
ಲಖನೌ: ಗುಲಾಮಿ ಮನೋವೃತ್ತಿಯು ನಮ್ಮ ಮನಸ್ಸಿನಲ್ಲಿ ಎಷ್ಟು ಬೇರೂರಿದೆ ಎಂದರೆ ನಾವು ಭಾರತೀಯತೆಗೆ ಪ್ರಾಮುಖ್ಯತೆ ನೀಡುವುದನ್ನು ನಿಲ್ಲಿಸಿದ್ದೇವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.
ಲಖನೌ ವಿಶ್ವವಿದ್ಯಾನಿಲಯದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
‘ಒಂದು ಕಾಲದಲ್ಲಿ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳು ಭಾರತದಲ್ಲಿ ಇದ್ದವು. 5 ಸಾವಿರದಿಂದ 12 ಸಾವಿರ ವರ್ಷಗಳ ಇತಿಹಾಸವನ್ನು ಪ್ರಪಂಚದ ಮುಂದೆ ಪ್ರಸ್ತುತ ಪಡಿಸುವ ಇಂತಹ ದೇಶ, ಧರ್ಮ ಹಾಗೂ ಪಂಥ ಮತ್ತೊಂದು ಇದೆಯೇ ಎಂದು ಅವರು ಹೇಳಿದ್ದಾರೆ.
‘ರಾಮ ಸಾವಿರಾರು ವರ್ಷಗಳ ಹಿಂದೆ ತ್ರೇತಾಯುಗದಲ್ಲಿ ಜನಿಸಿದರು. ಎಷ್ಟು ಯುಗಗಳು ಕಳೆದಿವೆ ಎಂದು ಯಾರಿಗೆ ತಿಳಿದಿದೆ. ಆದರೆ, ನಾವು ಸಂಪ್ರದಾಯದ ವಾಹಕರಾಗಿ ಉಳಿದಿದ್ದೇವೆ. ವೈದಿಕ ಸಂಪ್ರದಾಯ, ಶಾಸನ, ಪುರಾಣ, ಸ್ಮೃತಿ ಹಾಗೂ ಗ್ರಂಥಗಳ ಮೂಲಕ ಇತಿಹಾಸವು ಉಳಿದಿದೆ. ಆದರೆ, ಸಂಪ್ರದಾಯವನ್ನು ವಿಸ್ತರಿಸುವ ಕೆಲಸವನ್ನು ನಾವು ನಿಲ್ಲಿಸಿದ್ದೇವೆ’ ಎಂದು ಆದಿತ್ಯನಾಥ ತಿಳಿಸಿದ್ದಾರೆ.
‘ನಮ್ಮ ವ್ಯಕ್ತಿತ್ವದ ಬಗ್ಗೆ ಹೆಮ್ಮೆ ಪಡುವ ಬದಲು ಕೀಳರಿಮೆಗೆ ಒಳಗಾಗಿ, ಅಪರಿಚಿತರಿಗೆ ಪ್ರಾಮುಖ್ಯತೆ ನೀಡುವುದಕ್ಕೆ ಪ್ರಾರಂಭಿಸಿದ್ದೇವೆ. ಈ ಗುಲಾಮಿ ಮನೋವೃತ್ತಿಯು ನಮ್ಮ ಮನಸ್ಸಿನಲ್ಲಿ ಎಷ್ಟು ಬೇರೂರಿದೆ ಎಂದರೆ ನಾವು ಭಾರತೀಯತೆಗೆ ಪ್ರಾಮುಖ್ಯತೆ ನೀಡುವುದನ್ನು ನಿಲ್ಲಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.
ನಾವು ನಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ, 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುವುದನ್ನು ಪ್ರಪಂಚದ ಯಾವ ಶಕ್ತಿಯು ತಡೆಯಲಾರದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.