ADVERTISEMENT

ವೇದ ವಿದ್ವಾಂಸ, ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2020, 14:31 IST
Last Updated 11 ಸೆಪ್ಟೆಂಬರ್ 2020, 14:31 IST
ಸ್ವಾಮಿ ಅಗ್ನಿವೇಶ್
ಸ್ವಾಮಿ ಅಗ್ನಿವೇಶ್   

ನವದೆಹಲಿ: ವೇದ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ ಶುಕ್ರವಾರ ಸಂಜೆ 6.55ಕ್ಕೆ ನಿಧನರಾದರು. ಬಹು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಕಳೆದ ಕೆಲ ದಿನಗಳಿಂದ ಗಂಭೀರವಾಗಿತ್ತು.

21ನೇ ಸೆಪ್ಟೆಂಬರ್ 1939ರಂದು ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ಜನಿಸಿದ್ದ ಅವರು ಹರಿಯಾಣದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಆರ್ಯ ಸಮಾಜದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಜೀತದಾಳುಗಳ ವಿಮುಕ್ತಿಗಾಗಿ ಹೋರಾಡಲೆಂದು 1981ರಲ್ಲಿ ಬಾಂಡೆಡ್ ಲೇಬರ್ ಲಿಬರೇಶನ್ ಫ್ರಂಟ್ ಸ್ಥಾಪಿಸಿದ್ದರು. 2004ರಿಂದ 2014ರವರೆಗೆ ಆರ್ಯ ಸಮಾಜದ ವಿಶ್ವ ಮಂಡಳಿಯ ಅಧ್ಯಕ್ಷರಾಗಿದ್ದರು. 1994ರಿಂದ 2004ರವರೆಗೆ ವಿಶ್ವಸಂಸ್ಥೆಯ ಜೀತ ವಿಮುಕ್ತಿಗಾಗಿನ ನಿಧಿಯ ಅಧ್ಯಕ್ಷರಾಗಿದ್ದರು.

ADVERTISEMENT

ಕಟು ಹಿಂದುತ್ವ ಪ್ರತಿಪಾದನೆಯನ್ನು ಅಗ್ನಿವೇಶ್ ವಿರೋಧಿಸುತ್ತಿದ್ದರು. 'ಹಿಂದೂ ಧರ್ಮದ ನೈಜ ಆಶಯಗಳನ್ನು ಆರ್‌ಎಸ್‌ಎಸ್‌ ಪ್ರತಿನಿಧಿಸುತ್ತಿಲ್ಲ' ಎಂದು ಸಾರಿ ಹೇಳುತ್ತಿದ್ದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಅಗ್ನಿವೇಶ್ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಯ ನಂತರ ಅವರು ಬರೆದಿದ್ದ ಬಹಿರಂಗ ಪತ್ರವು ಅಗ್ನಿವೇಶ್ ಅವರ ವಿಚಾರಧಾರೆಯನ್ನು ಸ್ಪಷ್ಟಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.