ADVERTISEMENT

ಹಿಂದೂ ಮಹಿಳೆಯರನ್ನು ಗುರಿಯಾಗಿಸಿಕೊಂಡ ಸಾಮಾಜಿಕ ಜಾಲತಾಣಗಳ ನಿರ್ಬಂಧ

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಕ್ರಮ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 13:53 IST
Last Updated 5 ಜನವರಿ 2022, 13:53 IST

ನವದೆಹಲಿ: ‘ಬುಲ್ಲಿ ಬಾಯ್‌’ ನಂತರ ಈಗ ಫೇಸ್‌ಬುಕ್ ಮತ್ತು ಟೆಲಿಗ್ರಾಂ ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿಹಿಂದೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ ಎನ್ನುವ ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಭರವಸೆ ನೀಡಿದ್ದಾರೆ.

ಟೆಲಿಗ್ರಾಂ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ದೂರಿಗೆ ಪ್ರತಿಕ್ರಿಯಿಸಿದ ಸಚಿವರು, ‘ಚಾನೆಲ್ ಅನ್ನು ನಿರ್ಬಂಧಿಸಲಾಗಿದೆ. ಭಾರತ ಸರ್ಕಾರವು ಕ್ರಮಕ್ಕಾಗಿ ರಾಜ್ಯಗಳ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ’ ಎಂದು ಹೇಳಿದ್ದಾರೆ.

ಟೆಲಿಗ್ರಾಂನಲ್ಲಿ ಹಿಂದೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಫೋಟೋಗಳನ್ನು ಹಂಚಿಕೊಳ್ಳುವ ಮತ್ತು ನಿಂದಿಸುವ ಚಾನಲ್ ಇದೆ ಎಂದು ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದರು. ‘ಈ ಚಾನಲ್ ಅನ್ನು 2021ರ ಜೂನ್‌ನಲ್ಲಿ ರಚಿಸಲಾಗಿದೆ. ದಯವಿಟ್ಟು ಈ ಚಾನಲ್‌ನ ಹಿಂದೆ ಇರುವ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದೂಟ್ವಿಟರ್‌ ಬಳಕೆದಾರರು ಕೋರಿದ್ದರು.

ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಈ ಸಂಬಂಧ ಟ್ವೀಟ್ ಮಾಡಿದ್ದು, ‘ಚಾನಲ್ ಅನ್ನು ತೆಗೆದುಹಾಕಲು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ತಂಡಕ್ಕೆ ನಿರ್ದೇಶನ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.

‘ಬುಲ್ಲಿ ಬಾಯ್’ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್ ಮಾಡಿ ಅವರಿಗೆ ಕಿರುಕುಳ ನೀಡುವ ಮತ್ತು ಅವರನ್ನು ಹರಾಜು ಹಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮತ್ತು ಮುಂಬೈ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.