ADVERTISEMENT

ಸಾಮಾಜಿಕ ಮಾಧ್ಯಮಗಳು ಜನರ ಮೂಲಭೂತ ಹಕ್ಕುಗಳನ್ನು ಗೌರವಿಸಬೇಕು- ಕೇಂದ್ರ ಸರ್ಕಾರ

ದೆಹಲಿ ಹೈಕೋರ್ಟ್‌ಗೆ ಮಾಹಿತಿ

ಪಿಟಿಐ
Published 30 ಮಾರ್ಚ್ 2022, 14:44 IST
Last Updated 30 ಮಾರ್ಚ್ 2022, 14:44 IST
court
court   

ನವದೆಹಲಿ: ಸಂವಿಧಾನವು ದೇಶದ ಪ್ರಜೆಗಳಿಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ಸಾಮಾಜಿಕ ಮಾಧ್ಯಮಗಳು ಗೌರವಿಸಬೇಕು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.

‘ಸಾಮಾಜಿಕ ವ್ಯವಸ್ಥೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯು ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಾರದು. ಮುಖ್ಯವಾಹಿನಿಯಿಂದ ದೂರವಿಡುವ ಕೆಲಸವೂ ಆಗಬಾರದು’ ಎಂದು ಕೇಂದ್ರ ಸರ್ಕಾರವು ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.

ತನ್ನ ಖಾತೆಯನ್ನು ಅಮಾನತು ಮಾಡಿದ ಟ್ವಿಟರ್‌ನ ಕ್ರಮ ಪ್ರಶ್ನಿಸಿ ಈ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ಕೇಂದ್ರ ಸರ್ಕಾರ ಈ ಅಭಿಪ್ರಾಯ ತಿಳಿಸಿದೆ.

ADVERTISEMENT

‘ತನ್ನ ನೀತಿಗಳು ಅಥವಾ ಐಟಿ ನಿಯಮಗಳನ್ನು ಉಲ್ಲಂಘಿಸುವಂತಹ ಮಾಹಿತಿ ಅಥವಾ ವಿಷಯವನ್ನು ಹಂಚಿಕೊಂಡಿದ್ದರೆ, ಆ ಬಗ್ಗೆ ಸಾಮಾಜಿಕ ಮಾಧ್ಯಮ ಸಂಸ್ಥೆಯು ತನ್ನ ಬಳಕೆದಾರರಿಗೆ ನೋಟಿಸ್‌ ನೀಡಿ, ಆ ಮಾಹಿತಿ/ವಿಷಯವನ್ನು ಅಳಿಸಿ ಹಾಕುವಂತೆ ಸೂಚಿಸಬೇಕು’.

‘ಬಳಕೆದಾರರ ಖಾತೆಯನ್ನು ಸಂಪೂರ್ಣವಾಗಿ ಅಳಿಸಿಹಾಕುವುದು ಸಂವಿಧಾನದ 12, 19 ಹಾಗೂ 21ನೇ ವಿಧಿಗಳ ಆಶಯಕ್ಕೆ ವಿರುದ್ಧವಾದುದು.’

‘ಅಭಿವ್ಯಕ್ತಿ ಹಾಗೂ ವಾಕ್‌ಸ್ವಾತಂತ್ರ್ಯದಂತಹ ಹಕ್ಕುಗಳ ದಮನ ಕಂಡುಬಂದಾಗ, ಅದಕ್ಕೆ ಸಾಮಾಜಿಕ ಮಾಧ್ಯಮಗಳ ಸಂಸ್ಥೆಗಳನ್ನೇ ಸಂಪೂರ್ಣವಾಗಿ ಹೊಣೆ ಮಾಡಬೇಕು. ಇಲ್ಲದಿದ್ದಲ್ಲಿ, ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದ ಮೇಲೆ ಭೀಕರ ಪರಿಣಾಮ ಉಂಟಾಗುತ್ತದೆ’ ಎಂದು ಕೇಂದ್ರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.