ADVERTISEMENT

4 ಹಂತಗಳಲ್ಲಿ ಘನ ತ್ಯಾಜ್ಯ ಬೇರ್ಪಡಿಸುವುದು ಕಡ್ಡಾಯ: ಏಪ್ರಿಲ್ 1ರಿಂದ ನಿಯಮ ಜಾರಿ

ಪಿಟಿಐ
Published 29 ಜನವರಿ 2026, 4:48 IST
Last Updated 29 ಜನವರಿ 2026, 4:48 IST
<div class="paragraphs"><p>ಪ್ರಜಾವಾಣಿ ಚಿತ್ರ</p></div>

ಪ್ರಜಾವಾಣಿ ಚಿತ್ರ

   

ನವದೆಹಲಿ: ಭಾರಿ ಪ್ರಮಾಣದಲ್ಲಿ ಘನ ತ್ಯಾಜ್ಯ ಸೃಷ್ಟಿಯಾಗುವ ಸಂಘ–ಸಂಸ್ಥೆಗಳು ಕಸವನ್ನು ನಾಲ್ಕು ಹಂತಗಳಲ್ಲಿ ಬೇರ್ಪಡಿಸುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರವು ಬುಧವಾರ ಹೊಸ ನಿಯಮಗಳನ್ನು ಪ್ರಕಟಿಸಿದೆ.

ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಹಾಗೂ ವಿಶೇಷ ಕಾಳಜಿಯ ತ್ಯಾಜ್ಯ ಎಂದು ವರ್ಗೀಕರಿಸಲಾಗಿದೆ.

ADVERTISEMENT

ಹೊಸ ನಿಯಮಗಳು ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಬುಧವಾರ ತಿಳಿಸಿದ್ದಾರೆ.

ಹೊಸ ನಿಯಮಗಳ ಪ್ರಕಾರ, ಸುಮಾರು 20,000 ಚದರ ಮೀಟರ್‌ ಅಥವಾ ಅದಕ್ಕಿಂತ ಹೆಚ್ಚಿನ ಸ್ಥಳದಲ್ಲಿ ಇಲ್ಲವೇ, 40,000 ಲೀಟರ್‌ ಅಥವಾ ಅದಕ್ಕಿಂತ ಹೆಚ್ಚಿನ ನೀರು ಬಳಸುವ, ಇಲ್ಲವೇ ನಿತ್ಯ 100 ಕೆ.ಜಿ ಅಥವಾ ಅದಕ್ಕಿಂತ ಹೆಚ್ಚು ಘನತ್ಯಾಜ್ಯ ಉದ್ಪಾದಿಸುವ ಸಂಸ್ಥೆಗಳು / ಘಟಕಗಳನ್ನು ಬೃಹತ್‌ ಘನ ತ್ಯಾಜ್ಯ ಉದ್ಪಾದಕರು ಎಂದು ಪರಿಗಣಿಸಲಾಗುತ್ತದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಸಂಘ–ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು, ವಸತಿ ಸಂಘಟನೆಗಳು ಇದರ ವ್ಯಾಪ್ತಿಗೆ ಬರುತ್ತವೆ.

ಈ ಸಂಸ್ಥೆಗಳು ತಮ್ಮಲ್ಲಿ ಸೃಷ್ಟಿಯಾಗುವ ತಾಜ್ಯವನ್ನು ನಿಯಮಾನುಸಾರ, ಪರಿಸರಕ್ಕೆ ಹಾನಿಯಾಗದಂತೆ ಸಂಗ್ರಹಿಸಿ, ಸಾಗಿಸಿ, ಸಂಸ್ಕರಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ. ಸರ್ಕಾರದ ಈ ಕ್ರಮವು, ಸ್ಥಳೀಯ ಸಂಸ್ಥೆಗಳ ಮೇಲಿನ ಹೊರೆಯನ್ನು ತಗ್ಗಿಸಲಿದ್ದು, ತ್ಯಾಜ್ಯ ವಿಕೇಂದ್ರೀಕರಣವನ್ನು ಉತ್ತೇಜಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಅವಕಾಶ ಸ್ಥಳೀಯ ಸಂಸ್ಥೆಗಳ ಬೈಲಾಗಳಲ್ಲಿದೆ.

'ಪರಿಷ್ಕೃತ ನಿಯಮಗಳು ಪರಿಣಾಮಕಾರಿ ಘನ ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆಗೆ ಒತ್ತು ನೀಡುತ್ತವೆ' ಎಂದು ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.