ಕೋಲ್ಕತ್ತ: ಅಮೆರಿಕದೊಂದಿಗಿನ ಸುಂಕ ಸಮಸ್ಯೆಗೆ ಮುಂದಿನ ಎಂಟತ್ತು ವಾರಗಳಲ್ಲಿ ಪರಿಹಾರ ದೊರೆಯುವ ನಿರೀಕ್ಷೆಯಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಗುರುವಾರ ಹೇಳಿದ್ದಾರೆ.
ಭಾರತ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಎರಡು ದೇಶಗಳ ಸರ್ಕಾರಗಳ ನಡುವೆ ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕವು ಭಾರತದ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸಿದೆ. ಪ್ರತಿಸುಂಕದ ರೂಪದಲ್ಲಿ ಶೇ 25ರಷ್ಟು ತೆರಿಗೆ ಹಾಗೂ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಶೇ 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ.
ಶೇ 50ರಷ್ಟು ತೆರಿಗೆ ವಿಧಿಸುವ ಅಮೆರಿಕದ ಕ್ರಮವನ್ನು ಭಾರತವು ‘ಅನ್ಯಾಯ’ ಎಂದು ಹೇಳಿದೆ.
ಸುಂಕ ವಿಚಾರವಾಗಿ ಸೋಮವಾರ ನವದೆಹಲಿಗೆ ಭೇಟಿ ನೀಡಿದ ಅಮೆರಿಕದ ಮುಖ್ಯ ಸಂಧಾನಕಾರ ಬ್ರೆಂಡನ್ ಲಿಂಚ್ ಅವರೊಂದಿಗೆ ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಮಾತುಕತೆ ನಡೆಸಿದ್ದಾರೆ.
ಇಬ್ಬರಿಗೂ ಅನುಕೂಲ ಆಗುವ ಒಪ್ಪಂದವೊಂದಕ್ಕೆ ಆದಷ್ಟು ಬೇಗ ಅಂತಿಮ ರೂಪ ನೀಡಲು ಎರಡೂ ದೇಶಗಳು ಒಪ್ಪಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.