ADVERTISEMENT

‘ಸೋರೊಸ್’ ನೆರವು ಪಡೆಯುವ ಸಂಸ್ಥೆ ಜೊತೆ ಸೋನಿಯಾ ನಂಟು: ಬಿಜೆಪಿ ಆರೋಪ

ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಆರೋಪ

ಪಿಟಿಐ
Published 8 ಡಿಸೆಂಬರ್ 2024, 15:58 IST
Last Updated 8 ಡಿಸೆಂಬರ್ 2024, 15:58 IST
ಸೋನಿಯಾ ಗಾಂಧಿ –ಪಿಟಿಐ ಚಿತ್ರ
ಸೋನಿಯಾ ಗಾಂಧಿ –ಪಿಟಿಐ ಚಿತ್ರ   

ನವದೆಹಲಿ: ಜಾರ್ಜ್‌ ಸೋರೊಸ್ ಪ್ರತಿಷ್ಠಾನದಿಂದ ಹಣದ ಪಡೆಯುವ ಹಾಗೂ ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸುವ ಆಲೋಚನೆಯನ್ನು ಬೆಂಬಲಿಸುವ ಸಂಸ್ಥೆಯೊಂದರ ಜೊತೆ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನಂಟು ಇದೆ ಎಂದು ಬಿಜೆಪಿ ಭಾನುವಾರ ಆರೋಪಿಸಿದೆ.

ಭಾರತದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಸಂಸ್ಥೆಗಳು ಹೊಂದಿರುವ ಪ್ರಭಾವವನ್ನು ಈ ನಂಟು ತೋರಿಸುತ್ತಿದೆ ಎಂದು ‘ಎಕ್ಸ್‌’ ಮೂಲಕ ಬಿಜೆಪಿ ಹೇಳಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಈ ವಿಚಾರವಾಗಿ 10 ಪ್ರಶ್ನೆಗಳನ್ನು ಕೇಳುವುದಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಎಕ್ಸ್‌ ಮೂಲಕ ಹೇಳಿದ್ದಾರೆ.

ADVERTISEMENT

‘ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಯೋಜನೆ’ (ಒಸಿಸಿಆರ್‌ಪಿ) ಮಾಧ್ಯಮ ಪೋರ್ಟಲ್ ಮತ್ತು ಅಮೆರಿಕದ ಉದ್ಯಮಿ ಜಾರ್ಜ್‌ ಸೋರೊಸ್ ಅವರು, ಭಾರತದ ಅರ್ಥವ್ಯವಸ್ಥೆಯನ್ನು ಹಾಳುಮಾಡಲು ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ವಿರೋಧ ಪಕ್ಷಗಳ ಜೊತೆ ಶಾಮೀಲಾಗಿದ್ದಾರೆ ಎಂದು ದುಬೆ ದೂರಿದ್ದಾರೆ.

ಸೋನಿಯಾ ಗಾಂಧಿ ಅವರು, ‘ಏಷ್ಯಾ ಪೆಸಿಫಿಕ್‌ನ ಪ್ರಜಾತಾಂತ್ರಿಕ ನಾಯಕರ ವೇದಿಕೆ (ಎಫ್‌ಡಿಎಲ್–ಎಪಿ) ಪ್ರತಿಷ್ಠಾನ’ದ ಸಹ ಅಧ್ಯಕ್ಷೆಯಾಗಿ, ಜಾರ್ಜ್‌ ಸೋರೊಸ್ ಪ್ರತಿಷ್ಠಾನದಿಂದ ಹಣಕಾಸಿನ ನೆರವು ಪಡೆಯುವ ಸಂಸ್ಥೆಯೊಂರ ಜೊತೆ ನಂಟು ಹೊಂದಿದ್ದಾರೆ ಎಂದು ಬಿಜೆಪಿ ಹೇಳಿದೆ.

‘ಕಾಶ್ಮೀರವನ್ನು ಪ್ರತ್ಯೇಕ ಅಂಗವಾಗಿ ಕಾಣುವ ಅಭಿಪ್ರಾಯವನ್ನು ಎಫ್‌ಡಿಎಲ್–ಎಪಿ ‍ಪ್ರತಿಷ್ಠಾನವು ವ್ಯಕ್ತಪಡಿಸಿದೆ’ ಎಂದು ಪಕ್ಷ ಹೇಳಿದೆ. ‘ಕಾಶ್ಮೀರವು ಪ್ರತ್ಯೇಕ ರಾಷ್ಟ್ರ ಎಂಬ ಆಲೋಚನೆಯನ್ನು ಬೆಂಬಲಿಸಿರುವ ಸಂಸ್ಥೆ ಮತ್ತು ಸೋನಿಯಾ ಗಾಂಧಿ ನಡುವಿನ ನಂಟು, ಭಾರತದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಸಂಸ್ಥೆಗಳ ಪ್ರಭಾವವನ್ನು ಹಾಗೂ ಇಂತಹ ಸಂಬಂಧಗಳ ರಾಜಕೀಯ ಪರಿಣಾಮಗಳನ್ನು ಹೇಳುತ್ತದೆ’ ಎಂದು ಬಿಜೆಪಿ ಹೇಳಿದೆ.

ಸೋನಿಯಾ ಅವರು ರಾಜೀವ್ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷೆ ಆದ ನಂತರದಲ್ಲಿ ಜಾರ್ಜ್ ಸೋರೊಸ್ ಪ್ರತಿಷ್ಠಾನದ ಜೊತೆ ಪಾಲುದಾರಿಕೆ ಆಯಿತು. ಇದು ಭಾರತದ ಸಂಸ್ಥೆಗಳಿಗೆ ವಿದೇಶಿ ನೆರವಿನ ಪ್ರಭಾವವನ್ನು ತೋರಿಸುತ್ತದೆ ಎಂದು ಕೂಡ ಬಿಜೆಪಿ ಹೇಳಿದೆ.

ಅದಾನಿ ಕುರಿತು ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಜಾರ್ಜ್‌ ಸೋರೊಸ್ ಅವರಿಂದ ನೆರವು ಪಡೆಯುವ ಒಸಿಸಿಆರ್‌ಪಿ ನೇರ ಪ್ರಸಾರ ಮಾಡಿತು. ಇದನ್ನು ರಾಹುಲ್ ಅವರು ಅದಾನಿ ಅವರನ್ನು ಟೀಕಿಸಲು ಮೂಲವಾಗಿ ಬಳಸಿಕೊಂಡರು. ಇದು ಇವರ ಅಪಾಯಕಾರಿ ಸಂಬಂಧವನ್ನು ತೋರಿಸುತ್ತದೆ ಮತ್ತು ಭಾರತದ ಅರ್ಥವ್ಯವಸ್ಥೆಯ ಹಳಿತಪ್ಪಿಸಲು ಇವರು ನಡೆಸಿರುವ ಯತ್ನವನ್ನು ತೋರಿಸುತ್ತದೆ ಎಂದು ಬಿಜೆಪಿ ಆರೋಪಿಸಿದೆ.

ಒಸಿಸಿಆರ್‌ಪಿ ಮತ್ತು ಸೋರೊಸ್ ಅವರ ಕೆಲಸವು ವಿರೋಧ ಪಕ್ಷಗಳ ನಾಯಕರ ಜೊತೆ ಸೇರಿಕೊಂಡು ಭಾರತದ ಅರ್ಥವ್ಯವಸ್ಥೆಯನ್ನು ಹಾಳು ಮಾಡುವುದು ಹಾಗೂ ಮೋದಿ ನೇತೃತ್ವದ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದು ಎಂದು ದುಬೆ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.