ನವದೆಹಲಿ: ಈ ಬಾರಿ ಚುನಾವಣೆಯಲ್ಲಿ ಉಸ್ತುವಾರಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ ಸರ್ಕಾರವನ್ನು ಕಿತ್ತೆಸೆಯುವಂತೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತೆಲಂಗಾಣ ಮತದಾರರಿಗೆ ಮನವಿ ಮಾಡಿದ್ದಾರೆ.
ಪ್ರತ್ಯೇಕ ತೆಲಂಗಾಣ ಕಾಂಗ್ರೆಸ್ ಕನಸಿನ ಕೂಸು. ನಾಲ್ಕೂವರೆ ವರ್ಷಗಳ ಹಿಂದೆ ತೆಲಂಗಾಣ ಪ್ರತ್ಯೇಕ ರಾಜ್ಯವಾಗಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಾರಣ. ಆದರೆ, ಅಧಿಕಾರಕ್ಕೆ ಬಂದ ಟಿಆರ್‌ಎಸ್ ಸರ್ಕಾರ ಜನರ ಬೆನ್ನಿಗೆ ಚೂರಿ ಹಾಕಿತು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್, ತೆಲುಗುದೇಶಂ, ಟಿಜೆಎಸ್ ಮತ್ತು ಸಿಪಿಐ ಒಳಗೊಂಡ ಪ್ರಜಾಕೂಟಕ್ಕೆ ಮತ ಹಾಕುವಂತೆ ಸೋನಿಯಾ ಮನವಿ ಮಾಡಿಕೊಂಡ ವಿಡಿಯೊವನ್ನು ಕಾಂಗ್ರೆಸ್ ಮಂಗಳವಾರ ರಾತ್ರಿ ಬಿಡುಗಡೆ ಮಾಡಿದೆ.
‘ಕಾಂಗ್ರೆಸ್ ನೇತೃತ್ವದ ‘ಪ್ರಜಾಕೂಟ’ ತೆಲಂಗಾಣ ಜನತೆಯ ಧ್ವನಿಯಂತೆ ಕೆಲಸ ಮಾಡುತ್ತದೆ. ಜನರ ಆಶೋತ್ತರ, ಕನಸುಗಳನ್ನು ಈಡೇರಿಸಲು ಬದ್ಧವಾಗಿದೆ. ನೀವು ನೀಡುವ ಮತ ತೆಲಂಗಾಣದ ಭವಿಷ್ಯವನ್ನು ಮಾತ್ರವಲ್ಲ, ನಿಮ್ಮ ಭವಿಷ್ಯವನ್ನೂ ರೂಪಿಸುತ್ತದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.