ADVERTISEMENT

ಸರ್ವಾಧಿಕಾರದ ವಿರುದ್ಧ ಹೋರಾಡಲು ಸೋನಿಯಾ ಗಾಂಧಿ ಕರೆ

ಪಿಟಿಐ
Published 29 ಡಿಸೆಂಬರ್ 2020, 4:43 IST
Last Updated 29 ಡಿಸೆಂಬರ್ 2020, 4:43 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ದೇಶದಲ್ಲಿ ಸರ್ವಾಧಿಕಾರ ಧೋರಣೆಯ ವಿರುದ್ಧ ಹೋರಾಡಲು ಮತ್ತು ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಜನರ ರಕ್ಷಣೆಗಾಗಿ ಎಲ್ಲರೂ ಒಗ್ಗೂಡಬೇಕು ಎಂದು ಕಾಂಗ್ರೆಸ್ ಸ್ಥಾಪನೆಯ ದಿನದಂದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಕರೆ ನೀಡಿದರು.

ಕಾಂಗ್ರೆಸ್ 136ನೇ ಸಂಸ್ಥಾಪನಾ ದಿನಾಚರಣೆಯಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಸ್ವಾತಂತ್ರ್ಯ ಪೂರ್ವದಂತೆ ದೇಶವು ಕಷ್ಟದ ಸಮಯದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟ ಸಂಗ್ರಾಮದಲ್ಲಿ ಜನಾಂದೋಲನದ ಭಾಗವಾಗಿ ಪಕ್ಷವನ್ನು ಕಟ್ಟಲಾಯಿತು. ನಾಯಕರು ಹಾಗೂ ಕಾರ್ಯಕರ್ತರ ದೌರ್ಜನ್ಯದ ಕಠಿಣ ಸಮಯದಲ್ಲೂ ಪಕ್ಷ ಹಾದು ಹೋಗಿದೆ ಎಂದು ಹೇಳಿದರು.

ADVERTISEMENT

ದೇಶವು ಸ್ವಾತಂತ್ರ್ಯ ಪಡೆಯುವಲ್ಲಿ ಮತ್ತು ದೇಶ ಸೇವೆಯಲ್ಲಿ ತಮ್ಮ ಗುರಿ ಸಾಧಿಸುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಂದಿಗೂ ಹಿಂದೆ ಬಿದ್ದಿಲ್ಲ. ಲಾಠಿ ಪ್ರಹಾರವಾದಾಗಲೂ, ಜೈಲಿಗೆ ಸೇರಿದಾಗಲೂ ತ್ಯಾಗಗಳನ್ನು ಮಾಡಿ ದೇಶದ ಹಳೆಯ ಪಕ್ಷವು ರಾಷ್ಟ್ರಕ್ಕೆ ಬಲವಾದ ಅಡಿಪಾಯ ಹಾಕಿಕೊಟ್ಟಿದೆ ಎಂದರು.

ಇಂದು ಮತ್ತೊಮ್ಮೆ ಸ್ವಾತಂತ್ರ್ಯ ಪೂರ್ವದ ಸನ್ನಿವೇಶವೇ ಸೃಷ್ಟಿಯಾಗಿದೆ. ಜನರ ಹಕ್ಕುಗಳನ್ನು ಹತ್ತಿಕ್ಕಲಾಗಿದೆ. ಎಲ್ಲೆಡೆ ಸರ್ವಾಧಿಕಾರವಿದೆ. ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಿತ್ತೊಗೆಯಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ನಿರುದ್ಯೋಗ ಉತ್ತುಂಗದಲ್ಲಿದ್ದು, ರೈತರ ಮೇಲೆ ದಾಳಿ ನಡೆಯುತ್ತಿದೆ. ಅನ್ನದಾತರ ಮೇಲೆ ಕಪ್ಪು ಕಾನೂನುಗಳನ್ನು ವಿಧಿಸಲಾಗಿದೆ. ಅಂತಹ ಸಂದರ್ಭದಲ್ಲಿ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸುವುದು ಮತ್ತು ಅದರ ವಿರುದ್ಧ ಹೋರಾಡುವುದು ನಮ್ಮ ಜವಾಬ್ದಾರಿಯಾಗಿದೆ. ಇದುವೇ ನಿಜವಾದ ದೇಶಭಕ್ತಿ ಎಂದರು.

ತ್ರಿವರ್ಣ ಧ್ವಜದ ಹೆಮ್ಮೆ ಹಾಗೂ ಗೌರವ ಉಳಿಸಿಕೊಳ್ಳಲು ನಾವೆಲ್ಲರೂ ಒಂದಾಗಬೇಕು. ಅದರಿಂದಾಗಿಯೇ ನಾವು ಸ್ವಾತಂತ್ರ್ಯವನ್ನು ಸಾಧಿಸಿದ್ದೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.