ADVERTISEMENT

ಬಿಎಸ್‌ಪಿ ಮತಬ್ಯಾಂಕ್‌ಗೆ ಕನ್ನ ಹಾಕಲು ಎಸ್‌ಪಿ ಯತ್ನ

ಭೀಮ್‌ ಆರ್ಮಿ ಸಂಸ್ಥಾಪಕ ಚಂದ್ರಶೇಖರ್‌ ಜೊತೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 19:31 IST
Last Updated 29 ನವೆಂಬರ್ 2021, 19:31 IST
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ   

ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೀಗ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಮತ ಬ್ಯಾಂಕ್ ಆಗಿರುವ ಜಾಟವ (ಎಸ್‌ಸಿ) ಸಮುದಾಯದ ಮೇಲೆ ಕಣ್ಣು ನೆಟ್ಟಿದ್ದಾರೆ.

ಇತರ ಹಿಂದುಳಿದ ಸಮುದಾಯದ (ಒಬಿಸಿ) ಮತದಾರರ ಮೇಲೆ ಪ್ರಭಾವ ಬೀರಬಲ್ಲ ಸಣ್ಣಪುಟ್ಟ ಪಕ್ಷಗಳೊಂದಿಗೆ ಈಗಾಗಲೇ ಮೈತ್ರಿ ಗಟ್ಟಿಮಾಡಿಕೊಂಡಿರುವ ಅಖಿಲೇಶ್‌, ಈಗ ‘ದಲಿತ’ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಈ ದಿಸೆಯಲ್ಲಿ ‘ದಲಿತ’ ಮುಖಂಡ, ಭೀಮ್‌ ಆರ್ಮಿ ಸಂಸ್ಥಾಪಕ ಚಂದ್ರಶೇಖರ್‌ ಅಲಿಯಾಸ್‌ ರಾವಣ್‌ ಅವರೊಂದಿಗೆ ಭಾನುವಾರ ಒಂದು ಗಂಟೆ ಮಾತುಕತೆ ನಡೆಸಿದ್ದಾರೆ.

ಚಂದ್ರಶೇಖರ್‌, ‘ದಲಿತ’ ಮತದಾರರ ಮೇಲೆ ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶದಪಶ್ಚಿಮ ಭಾಗದ ಸಹರನ್‌ಪುರ, ಮುಜಫ್ಫರ್‌ನಗರ, ಬುಲಂದ್‌ಶಹರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಭಾವ ಹೊಂದಿದ್ದಾರೆ.

ADVERTISEMENT

ಅಖಿಲೇಶ್‌ ಜತೆಗಿನ ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್‌, ಈ ಸರ್ಕಾರವು ದಲಿತ ವಿರೋಧಿಯಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

‘ಮೈತ್ರಿ ವಿಷಯವಾಗಿ ಅಖಿಲೇಶ್‌ ಅವರೊಂದಿಗೆ ಮಾತುಕತೆಯಾಗಿದ್ದು, ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ನಮಗೆ ಸಮಾನ ಶತ್ರು ಎಂದರೆ ಬಿಜೆಪಿ. ಹೀಗಾಗಿ, ಬರಲಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಬಗ್ಗೆ ಚರ್ಚೆಯಾಯಿತು’ ಎಂದರು.

ಕಳೆದ ವರ್ಷ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ, ಬಿಎಸ್‌ಪಿ ಬಹುವಾಗಿ ನಿರೀಕ್ಷೆ ಇಟ್ಟುಕೊಂಡಿದ್ದ ಕ್ಷೇತ್ರದಲ್ಲಿ ಚಂದ್ರಶೇಖರ್‌ ಅವರ ಸಂಘಟನೆಯ ಆಜಾದ್ ಸಮಾಜ್‌ ಪಕ್ಷದ (ಕಾನ್ಶಿರಾಂ) ಅಭ್ಯರ್ಥಿಯು 13,500ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಈ ಮೂಲಕ ಬಿಎಸ್‌ಪಿಗೆ ಎಚ್ಚರಿಕೆಯನ್ನೂ ರವಾನಿಸಿದ್ದರು.

ಈ ಕ್ಷೇತ್ರದಲ್ಲಿ 21 ಸಾವಿರ ಮತಗಳ ಅಂತರದೊಂದಿಗೆ ಬಿಜೆಪಿ ಗೆಲುವು ಸಾಧಿಸಿತ್ತು. ಎರಡನೇ ಸ್ಥಾನದಲ್ಲಿ ಬಿಎಸ್‌ಪಿ ಇದ್ದರೆ, ಚಂದ್ರಶೇಖರ್‌ ಅವರ ಸಂಘಟನೆಯ ಅಭ್ಯರ್ಥಿ ಮೂರನೇ ಸ್ಥಾನದಲ್ಲಿದ್ದು, ಕಾಂಗ್ರೆಸ್‌ ಪಕ್ಷವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದ್ದರು.

ಚಂದ್ರಶೇಖರ್‌ ಬಣವು ತಮ್ಮ ಪಕ್ಷಕ್ಕೆ ದೊಡ್ಡ ಹೊಡೆತ ಎಂಬುದನ್ನು ಬಿಎಸ್‌ಪಿ ನಾಯಕರು ಕೂಡ ಒಪ್ಪುತ್ತಾರೆ. ಮಾಯಾವತಿ ಅವರು‘ದಲಿತ’ರ ಹಿತ ಕಾಯಲಿಲ್ಲ ಎಂದು ಚಂದ್ರಶೇಖರ್‌ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಚಂದ್ರಶೇಖರ್‌ ಪ್ರವೇಶದಿಂದಾಗಿ, ಉತ್ತರ ಪ್ರದೇಶದಪಶ್ಚಿಮ ಭಾಗದಲ್ಲಿ ಗೆಲುವಿನ ನಿರೀಕ್ಷೆಯ ಕ್ಷೇತ್ರಗಳಲ್ಲಿ ಖಂಡಿತ ಹೊಡೆತ ಬೀಳುತ್ತದೆ ಎಂದು ಬಿಎಸ್‌ಪಿ ನಾಯಕರು ಹೇಳುತ್ತಾರೆ.

ಚಂದ್ರಶೇಖರ್‌ ಬಣದ ಸಖ್ಯವು, ಸಮಾಜವಾದಿ ಪಕ್ಷಕ್ಕೆಖಂಡಿತವಾಗಿಯೂ ಪ್ರಯೋಜನಕ್ಕೆ ಬರಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಬಿಎಸ್‌ಪಿಯ ಮತ ಬ್ಯಾಂಕ್‌ ಅನ್ನು ಕಸಿಯುವ ಸಾಮರ್ಥ್ಯವನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದು, ದಲಿತರ ಮತಗಳು ಅಖಿಲೇಶ್‌ಗೆ ಬೋನಸ್‌ ಆಗಿ ಪರಿಣಮಿಸಬಲ್ಲವು ಎನ್ನುತ್ತಾರೆ ಲಖನೌದ ರಾಜಕೀಯ ವಿಶ್ಲೇಷಕರೊಬ್ಬರು.

ಅಖಿಲೇಶ್, ಈಗಾಗಲೇ ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ), ರಾಜಭರ್‌ ಪಕ್ಷ, ಮಹಾನ್‌ ದಲ್‌ (ಒಬಿಸಿ ಸಂಘಟನೆ), ಅಪ್ನಾ ದಲ್‌ (ಕೆ), ಕುರ್ಮಿ ಸೇರಿದಂತೆ ಹಲವು ಪಕ್ಷಗಳೊಂದಿಗೆ ಮೈತ್ರಿಯನ್ನು ಪಕ್ಕಾ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.