ADVERTISEMENT

ಅಜಂ ಖಾನ್‌, ಪುತ್ರ ಅಬ್ದುಲ್ಲಾ ಅಜಂಗೆ 7 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 17:49 IST
Last Updated 17 ನವೆಂಬರ್ 2025, 17:49 IST
..
..   

ಲಖನೌ: ನಕಲಿ ದಾಖಲೆಗಳ ಮೂಲಕ ಎರಡು ಪ್ಯಾನ್‌ ಕಾರ್ಡ್‌ಗಳನ್ನು ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ಅಜಂ ಖಾನ್‌ ಹಾಗೂ ಅವರ ಪುತ್ರ ಅಬ್ದುಲ್ಲಾ ಅಜಂಗೆ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಜನಪ್ರತಿನಿಧಿಗಳ ನ್ಯಾಯಾಲಯವು ಸೋಮವಾರ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 

ನ್ಯಾಯಾಲಯವು ಶಿಕ್ಷೆ ಪ್ರಕಟಿಸುತ್ತಿದ್ದಂತೆಯೇ ಅಜಂ ಹಾಗೂ ಅಬ್ದುಲ್ಲಾ ಅವರನ್ನು ಪೊಲೀಸರು ವಶಕ್ಕೆ ಪಡೆದು, ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಮಾತನಾಡಿರುವ ಅಜಂ, ‘ಈ ಬಗ್ಗೆ ಹೇಳಲು ಇನ್ನೇನಿದೆ? ಇದು ನ್ಯಾಯಾಲಯದ ಆದೇಶ’ ಎಂದಿದ್ದಾರೆ.

‘ಅಜಂ ಅವರ ಪುತ್ರ ಅಬ್ದುಲ್ಲಾ 2017ರಲ್ಲಿ  ಚುನಾವಣೆಗೆ ಸ್ಪರ್ಧಿಸಲು ವಯಸ್ಸಿನ ಮಾನದಂಡಕ್ಕೆ ಅನುಗುಣವಾಗಿ ತಮ್ಮ ದಾಖಲೆ ಬದಲಿಸಲು ನಕಲಿ ದಾಖಲೆಗಳನ್ನು ಒದಗಿಸಿ ಪಾನ್‌ಕಾರ್ಡ್‌ ಪಡೆದಿದ್ದಾರೆ’ ಎಂದು ಬಿಜೆಪಿ ಶಾಸಕ ಆಕಾಶ್‌ ಸಕ್ಸೇನಾ 2019ರಲ್ಲಿ ದೂರು ನೀಡಿದ್ದರು.

ADVERTISEMENT

‘ಅಬ್ದುಲ್ಲಾ ಬಳಿ ಎರಡು ಪಾನ್‌ಕಾರ್ಡ್‌ಗಳಿವೆ. ಒಂದರಲ್ಲಿ ಅವರ ಜನ್ಮದಿನಾಂಕ 1993ರ ಜನವರಿ 1 ಎಂದು ನಮೂದಿಸಿದ್ದರೆ ಮತ್ತೊಂದರಲ್ಲಿ 1990 ಡಿಸೆಂಬರ್‌ 30 ಎಂದು ನಮೂದಿಸಲಾಗಿದೆ. ನಾಮಪತ್ರ ಸಲ್ಲಿಕೆವೇಳೆ 1990ರ ದಿನಾಂಕವಿರುವ ಪಾನ್‌ಕಾರ್ಡ್‌ ನೀಡಿದ್ದರು. ಇದಕ್ಕೆ ಅಜಂ ಅವರ ಬೆಂಬಲವೂ ಇದೆ’ ಎಂಬುದು ಸಕ್ಸೇನಾ ಅವರ ಆರೋಪವಾಗಿತ್ತು. 

ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ, ಸಾಕ್ಷಿ ದಾಖಲೆಗಳನ್ನು ಪರಿಶೀಲಿಸಿ ಈಗ ತೀರ್ಪು ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.