ADVERTISEMENT

ಉತ್ತರ ಪ್ರದೇಶ: ಎಸ್‌ಪಿ ನಾಯಕ, ಸುಗಂಧ ದ್ರವ್ಯ ಉದ್ಯಮಿ ಮನೆ ಮೇಲೆ ಐಟಿ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2021, 6:46 IST
Last Updated 31 ಡಿಸೆಂಬರ್ 2021, 6:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ:ಸಮಾಜವಾದಿ ಪಕ್ಷದ (ಎಸ್‌ಪಿ) ಸುಗಂಧ ದ್ರವ್ಯ 'ಸೆಂಟ್ ಆಫ್ ಸೋಶಿಯಲಿಸಂ' (ಸಮಾಜವಾದಿ ಸುಗಂಧ ದ್ರವ್ಯ) ತಯಾರಕ ಪುಷ್ಪರಾಜ್ ಜೈನ್ ಅವರಿಗೆ ಸೇರಿದ ಹಲವು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಉತ್ತರ ಪ್ರದೇಶ, ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್‌), ಮುಂಬೈ ಮತ್ತು ಇನ್ನಿತರ ಪ್ರದೇಶಗಳ ಸುಮಾರು 50 ಸ್ಥಳಗಳಲ್ಲಿತೆರಿಗೆ ವಂಚನೆ ಆರೋಪದ ಮೇಲೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪುಷ್ಪರಾಜ್‌ ಅವರು ಎಸ್‌ಪಿಯ ವಿಧಾನ ಪರಿಷತ್‌ ಸದಸ್ಯರೂ ಹೌದು. 2022ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು, ಪಕ್ಷದ ನಾಯಕ ಅಖಿಲೇಶ್ ಯಾದವ್‌ ಅವರ ನೇತೃತ್ವದಲ್ಲಿ ಕಳೆದ ತಿಂಗಳು 'ಸೆಂಟ್ ಆಫ್ ಸೋಶಿಯಲಿಸಂ' ಸುಗಂಧ ದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.

ADVERTISEMENT

ಕನೌಜ್ ಮೂಲದ 'ಮೊಹ‌ಮ್ಮದ್ ಯಾಕೂಬ್‌ ಸುಗಂಧ ದ್ರವ್ಯ' ಕಚೇರಿಯಲ್ಲೂ ಇಂದು ಬೆಳಿಗ್ಗೆ ಶೋಧ ನಡೆಸಲಾಗಿದೆ.

ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ವಿರುದ್ಧ ಕಿಡಿಕಾರಿರುವ ಎಸ್‌ಪಿ, ಕೇಂದ್ರದ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದೆ.

'ಸೆಂಟ್ ಆಫ್ ಸೋಶಿಯಲಿಸಂ' ಸುಗಂಧ ದ್ರವ್ಯ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಸಮಾಜವಾದಿ ಪಕ್ಷದ ನಾಯಕರು

'ಕಳೆದ ಬಾರಿಯ ದೊಡ್ಡ ವೈಫಲ್ಯದ ಬಳಿಕ, ಬಿಜೆಪಿಯ ಮಿತ್ರ ಆದಾಯ ತೆರಿಗೆ ಇಲಾಖೆಯು ಕೊನೆಗೂ ವಿಧಾನ ಪರಿಷತ್ ಸದಸ್ಯ ಪುಷ್ಪರಾಜ್‌ ಜೈನ್‌ ಮತ್ತು ಕನೌಜ್‌ನ ಇತರ ಸುಗಂಧ ದ್ರವ್ಯ ಉದ್ಯಮಿಗಳಮೇಲೆ ದಾಳಿ ನಡೆಸಿದೆ. ಉತ್ತರ ಪ್ರದೇಶ ಚುನಾವಣೆ ಭಯದಿಂದ ಬಿಜೆಪಿಯು ಕೇಂದ್ರದ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದು ಸಾಮಾನ್ಯವಾಗಿದೆ.ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮತ ಚಲಾವಣೆ ‌ಮೂಲಕವೇ ಉತ್ತರ ನೀಡಲಿದ್ದಾರೆ' ಎಂದು ಟ್ವಿಟರ್‌ ಮೂಲಕ ಹರಿಹಾಯ್ದಿದೆ.

ಈ ತಿಂಗಳ ಆರಂಭದಲ್ಲಿಜಿಎಸ್‌ಟಿ ಗುಪ್ತಚರ ಘಟಕದ (ಡಿಜಿಜಿಐ) ಅಧಿಕಾರಿಗಳು ಕಾನ್ಪುರ ಮೂಲಕ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಅವರ ಮನೆಯಲ್ಲಿ ಶೋಧ ನಡೆಸಿ,₹ 197 ಕೋಟಿ ನಗದು, 23 ಕೆಜಿ ಚಿನ್ನಮತ್ತು ₹ 6 ಕೋಟಿ ಮೌಲ್ಯದ ಸರಕನ್ನು ವಶಕ್ಕೆ ಪಡೆದಿದ್ದರು.

ಉದ್ಯಮಿ ಪಿಯೂಷ್ ಜೈನ್, ಎಸ್‌ಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದುಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಬಿಜೆಪಿಯ ಹಲವು ನಾಯಕರು ಚುನಾವಣಾ ರ‍್ಯಾಲಿ ವೇಳೆ ಆರೋಪಿಸಿದ್ದರು. ಆದರೆ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅದನ್ನು ಅಲ್ಲಗಳೆದಿದ್ದರು.

ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಎಸ್‌ಪಿ ಅಧಿಕಾರದಲ್ಲಿ ಇದ್ದಾಗ ಉತ್ತರ ಪ್ರದೇಶದ ತುಂಬೆಲ್ಲಾ 'ಭ್ರಷ್ಟಾಚಾರದ ಪರಿಮಳ' ಹರಡಿತ್ತು ಎಂದು ಕಿಡಿಕಾರಿದ್ದರು.

ಪುಷ್ಪರಾಜ್ ಮತ್ತು ಪಿಯೂಷ್ ಜೈನ್ ಇಬ್ಬರೂ ಸುಗಂಧ ದ್ರವ್ಯ ಉದ್ಯಮಿಗಳಾಗಿದ್ದು, ನೆರೆಹೊರೆಯವರೇ ಆಗಿದ್ದಾರೆ ಎಂಬುದುವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.