ADVERTISEMENT

ಮುಂಬರುವ ಚುನಾವಣೆಗಳಲ್ಲಿ ಪ್ರತ್ಯೇಕ ಸ್ಪರ್ಧೆ- ಮಾಯಾವತಿ ಟ್ವೀಟ್

ಲೋಕಸಭೆಯಲ್ಲಿ ಒಂದಾಗಿ, ಮತ್ತೆ ಬೇರೆಯಾದ ಸೈಕಲ್ ಮತ್ತು ಆನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 10:37 IST
Last Updated 24 ಜೂನ್ 2019, 10:37 IST
   

ನವದೆಹಲಿ: ಉತ್ತರ ಪ್ರದೇಶ ರಾಜಕೀಯದಲ್ಲಿ ಮತ್ತೊಮ್ಮೆ ಸಂಚಲನ ಉಂಟು ಮಾಡುವ ಘಟನೆಗಳು ನಡೆಯುತ್ತಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿಒಂದಾಗಿದ್ದ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಈಗ ಬೇರ್ಪಡುವ ಮುನ್ಸೂಚನೆಗಳು ಕಾಣುತ್ತಿವೆ.

ಇದಕ್ಕೆ ಸಾಕ್ಷಿ ಎಂಬಂತೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಟ್ವೀಟ್ ಮಾಡಿದ್ದು,ಮುಂದಿನ ಚುನಾವಣೆಗಳನ್ನು ಬಹುಜನ ಸಮಾಜವಾದಿ ಪಕ್ಷ ಏಕಾಂಗಿಯಾಗಿ ಎದುರಿಸಲಿದೆ ಎಂದು ಬರೆದುಕೊಂಡಿದ್ದಾರೆ. ಈ ಹೇಳಿಕೆಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ಕೆರಳಿಸಿದೆ.ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ ಸೇರಿಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರು. ಎರಡೂ ಪಕ್ಷಗಳು ಎರಡು ಪ್ರಮುಖ ಜಾತಿಗಳಾದ ಯಾದವರು ಹಾಗೂ ದಲಿತ ಮತಗಳನ್ನು ಒಗ್ಗೂಡಿಸಿದರೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸದಂತೆ ನೋಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿದ್ದವು. ಆದರೆ, ಬಿಜೆಪಿ 62 ಸ್ಥಾನಗಳನ್ನು ಗಳಿಸುವ ಮೂಲಕ ನಾಗಾಲೋಟದಲ್ಲಿ ಮುಂದುವರಿದಿತ್ತು. ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಕೇವಲ 18 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಫಲಿತಾಂಶದ ನಂತರ ತಮ್ಮ ಲೆಕ್ಕಾಚಾರ ತಲೆಕೆಳಗಾದ ಕಾರಣ ತಳಮಟ್ಟದ ಕಾರ್ಯಕರ್ತರ ಭಾವನೆಯೇ ಮುಖ್ಯ ಎಂಬುದನ್ನು ಮನಗಂಡ ಮಾಯಾವತಿ ಎಸ್ಪಿ ಜೊತೆಗಿನ ಮೈತ್ರಿಯಿಂದ ಹೊರಬಂದು ಏಕಾಂಗಿಯಾಗಿ ಮುಂದಿನ ಚುನಾವಣೆಯನ್ನು ಎದುರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಎಸ್ಪಿ ಕೂಡ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ಸಮಾಜವಾದಿ ಪಕ್ಷ ನೇತೃತ್ವ ವಹಿಸಿದಅಖಿಲೇಶ್ ಯಾದವ್ ಕುಟುಂಬ2012-2017ರವರೆಗೆ ನಡೆಸಿದ ಆಡಳಿತದಲ್ಲಿ ಹಲವು ದಲಿತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿತ್ತು.ದಲಿತರಿಗೆ ಬಡ್ತಿ ನೀಡುವ ವಿಷಯದಲ್ಲಿ ತಾರತಮ್ಯ ಮಾಡಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೂ ಮಾಯಾವತಿ ರಾಷ್ಟ್ರದ ಹಿತದೃಷ್ಟಿಯಿಂದ ಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಪ್ರಕಟಿಸಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಫಲಿತಾಂಶದಲ್ಲಿ ಬಿಎಸ್ಪಿ ಹಾಗೂ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ ಸೇರಿ ಸ್ಪರ್ಧಿಸಿ 10 ಸ್ಥಾನಗಳನ್ನು ಪಡೆದಿದ್ದರೆ, ಎಸ್ಪಿ ಕೇವಲ ಐದು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಇದೆಲ್ಲವನ್ನೂ ಗಮನಿಸಿದ ಮಾಯಾವತಿ ಕಳೆದ ರಾತ್ರಿ ಪಕ್ಷದ ಮುಖಂಡರೊಡನೆ ಸುಮಾರು ಎರಡೂವರೆ ಗಂಟೆಗಳ ಕಾಲ ಚರ್ಚಿಸಿದರು. ನಂತರ ಸೋಮವಾರ ಬೆಳಗ್ಗೆ ಸಮಾಜವಾದಿ ಪಕ್ಷ ಇನ್ನು ಏಕಾಂಗಿಯಾಗಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಎದುರಿಸಲಿದೆ. ಎಸ್ಪಿ-ಬಿಸ್ಪಿ ಒಟ್ಟಾದರೆ ಬಿಜೆಪಿಯನ್ನು ಎದುರಿಸಲಾಗದು, ಪ್ರತ್ಯೇಕವಾಗಿಯೇ ಸ್ಪರ್ಧಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಮುಂಬರುವ 11 ವಿಧಾನಸಭೆ ಉಪಚುನಾವಣೆ ನಡೆಯಲಿದ್ದು ಎಸ್ಪಿ ಹಾಗೂ ಬಿಎಸ್ಪಿ ಎರಡೂ ಪ್ರತ್ಯೇಕವಾಗಿ ಸ್ಪರ್ಧಿಸಲಿವೆ. 2014ರ ಚುನಾವಣೆಗೆ ಹೋಲಿಸಿದರೆ, ಬಿಎಸ್ಪಿ ಈ ಬಾರಿಯ ಚುನಾವಣೆಯಲ್ಲಿ ಸೊನ್ನೆಯಿಂದ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ, 2014ಕ್ಕೆ ಹೋಲಿಸಿದರೆ, ಬಿಜೆಪಿ ಈ ಬಾರಿ 9 ಸ್ಥಾನಗಳನ್ನು ಕಳೆದುಕೊಂಡಿದೆ. 80ಸ್ಥಾನಗಳಲ್ಲಿ ಬಿಜೆಪಿಯನ್ನುಕೇವಲ 40 ಅಥವಾ ಅದಕ್ಕಿಂತ ಕಡಿಮೆ ಸ್ಥಾನಗಳಿಗೆ ತಂದು ನಿಲ್ಲಿಸಬೇಕು ಎಂದು ಎಸ್ಪಿ ಹಾಗೂ ಬಿಎಸ್ಪಿ ಲೆಕ್ಕಾಚಾರ ಹಾಕಿದ್ದವು. ಆದರೆ, ನರೇಂದ್ರ ಮೋದಿ ಅಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಬಿಜೆಪಿ 62 ಸ್ಥಾನಗಳಲ್ಲಿ ಲೋಕಸಭಾ ಸ್ಥಾನಗಳನ್ನು ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.