ADVERTISEMENT

ಜಾರ್ಖಂಡ್‌ | ಸ್ಪೇನ್‌ ಪ್ರವಾಸಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರ ಬಂಧನ

ಪಿಟಿಐ
Published 2 ಮಾರ್ಚ್ 2024, 15:42 IST
Last Updated 2 ಮಾರ್ಚ್ 2024, 15:42 IST
   

ದುಮ್ಕಾ, ಜಾರ್ಖಂಡ್: ಭಾರತ ಪ್ರವಾಸಕ್ಕೆ ಬಂದಿದ್ದ ಸ್ಪೇನ್‌ ದೇಶದ ಮಹಿಳೆ ಮೇಲೆ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರರಿಗೆ ಹುಡುಕಾಟ ಮುಂದುವರಿದಿದೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಂಚಿಯಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ಹಂಸಡೀಹಾ ಠಾಣೆ ವ್ಯಾಪ್ತಿಯ ಕೂರ್ಮಾಹಾಟ್ ಎಂಬಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ನೇಪಾಳದಿಂದ ದ್ವಿಚಕ್ರವಾಹನದಲ್ಲಿ ಬಂದಿದ್ದ ಸ್ಪೇನ್‌ನ ದಂಪತಿ ರಾತ್ರಿ ಕಳೆಯಲು ಟೆಂಟ್‌ ಹಾಕಿ ತಂಗಿದ್ದರು. ಇವರು ಜಾರ್ಖಂಡ್‌ನಿಂದ ಬಿಹಾರ ಮಾರ್ಗವಾಗಿ ನೇಪಾಳಕ್ಕೆ ತೆರಳುವವರಿದ್ದರು.

ADVERTISEMENT

ಅತ್ಯಾಚಾರ ಸಂತ್ರಸ್ತೆ ಹಾಗೂ ಹಲ್ಲೆಗೆ ಒಳಗಾಗಿರುವ ಪತಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 

ರಸ್ತೆ ಬದಿ ನಿಂತಿದ್ದರು: ‘ಶುಕ್ರವಾರ ರಾತ್ರಿ 11ರ ಸುಮಾರಿಗೆ ಹಂಸಡೀಹಾ ಠಾಣೆಯ ಪೊಲೀಸ್ ಗಸ್ತು ತಂಡವು ರಸ್ತೆ ಬದಿ ನಿಂತಿದ್ದ ಸ್ಪೇನ್‌ ದಂಪತಿಯನ್ನು ಕಂಡಿದ್ದಾರೆ. ಸ್ಪ್ಯಾನಿಶ್‌ ಭಾಷೆ ಮಾತ್ರ ಮಾತನಾಡುತ್ತಿದ್ದ ಅವರು ಏನು ಹೇಳುತ್ತಿದ್ದಾರೆ ಎಂಬುದು ಪೊಲೀಸರಿಗೆ ಅರ್ಥವಾಗಲಿಲ್ಲ. ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು. ಅತ್ಯಾಚಾರ ನಡೆದಿರುವ ವಿಷಯವನ್ನು ದಂಪತಿ, ವೈದ್ಯರಿಗೆ ತಿಳಿಸಿದ್ದಾರೆ’ ಎಂದು ದುಮ್ಕಾ ಎಸ್‌ಪಿ ಪೀತಾಂಬರ ಸಿಂಗ್‌ ಹೇಳಿದರು.

‘28 ವರ್ಷದ ಮಹಿಳೆ ಮತ್ತು 64 ವರ್ಷದ ಪತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರಿಗೆ ಸರೈಯಾಹಾಟ್‌ ಸಮುದಾಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲಿಂದ ಇವರಿಬ್ಬರು ಪೊಲೀಸರ ಭದ್ರತೆಯಲ್ಲಿ ತಮ್ಮ ದ್ವಿಚಕ್ರವಾಹನದಲ್ಲೇ 60 ಕಿ.ಮೀ. ಕ್ರಮಿಸಿ ಫೂಲೊ ಝಾನೊ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಬಂದಿದ್ದಾರೆ’ ಎಂದು ದುಮ್ಕಾ ಜಿಲ್ಲಾ ವೈದ್ಯರು ತಿಳಿಸಿದ್ದಾರೆ.

‘ಏಳರಿಂದ ಎಂಟು ಮಂದಿ ಸ್ಥಳೀಯ ಯುವಕರು ಘಟನೆಯಲ್ಲಿ ಭಾಗಿಯಾಗಿದ್ದಾರೆ’ ಎಂದು ಇನ್ನೊಬ್ಬರು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಅತ್ಯಾಚಾರ ಘಟನೆ ಜಾರ್ಖಂಡ್‌ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು. ಬಜೆಟ್‌ ಅಧಿವೇಶನದ ಕೊನೆಯ ದಿನವಾದ ಶನಿವಾರ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಅಮಿತ್‌ ಮಂಡಲ್, ದುಮ್ಕಾ ಎಸ್‌ಪಿ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಮತ್ತು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.