ಇಸ್ರೊ
ರಾಯಿಟರ್ಸ್ ಚಿತ್ರ
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ, ಚಂದ್ರಯಾನ, ಶುಭಾಂಶು ಶುಕ್ಲಾ ಬಾಹ್ಯಾಕಾಶ ಪಯಣ ಹಾಗೂ ಇಸ್ರೊದ ಇನ್ನಿತರ ಸಾಧನೆಗಳ ಕುರಿತಂತೆ ವಿಶೇಷ ಪಠ್ಯಕ್ರಮ ರಚಿಸಲು ಶಿಕ್ಷಣ ಸಚಿವಾಲಯ ಮುಂದಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಮುಂದಿನ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಅಸ್ತಿತ್ವದಲ್ಲಿರುವ ಪಠ್ಯಕ್ರಮದ ಜತೆಗೆ ಪೂರಕ ಪಠ್ಯಕ್ರಮವಾಗಿ ಈ ವಿಚಾರಗಳನ್ನು ಪರಿಚಯಿಸಲಾಗುತ್ತದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಈ ಪಠ್ಯಕ್ರಮ ಸಿದ್ಧಪಡಿಸಲಿದೆ ಎಂದೂ ಹೇಳಲಾಗಿದೆ.
ಮೇಲ್ಕಂಡ ಪ್ರತಿಯೊಂದು ವಿಚಾರದ ಬಗ್ಗೆಯೂ ಪಠ್ಯದಲ್ಲಿ 8ರಿಂದ 10 ಪುಟಗಳ ಮಾಹಿತಿ ಇರಲಿದೆ. ಪಠ್ಯಕ್ರಮವು ಎರಡು ವಿಭಾಗಗಳನ್ನು ಹೊಂದಿರಲಿದ್ದು, ಮೊದಲನೆಯದು 3ರಿಂದ 8ನೇ ತರಗತಿ ವಿದ್ಯಾರ್ಥಿಗಳು ಅರ್ಥೈಸಿಕೊಳ್ಳುವಂಥದ್ದಾಗಿರಲಿದೆ. ಮತ್ತೊಂದು 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ರಚಿಸಲಾಗುತ್ತಿದೆ ಎದೂ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಪಠ್ಯಕ್ರಮಗಳಲ್ಲೂ ಈ ಪೂರಕ ಪಠ್ಯಕ್ರಮಗಳ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗುವುದು. ರಾಜ್ಯಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪೂರಕ ಪಠ್ಯಕ್ರಮಗಳನ್ನು ಸೇರಿಸಿಕೊಳ್ಳಬಹುದು ಆದರೆ, ಈ ಪಠ್ಯಗಳನ್ನು ಅಳವಡಿಸುವುದು ಕಡ್ಡಾಯ ಎಂದು ಶೀಘ್ರವೇ ಕೇಂದ್ರ ತಿಳಿಸಲಿದೆ ಎಂದೂ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.